ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಅವಧಿ ಪೂರ್ಣಗೊಳಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಸಂಪುಟದ ಮೊದಲ ವಿಕೆಟ್ ಪತನವಾಗಿದೆ.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 94.73 ಕೋಟಿ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಸಚಿವ ನಾಗೇಂದ್ರ ಅವರ ತಲೆ ತಂಡಕ್ಕೆ ಒತ್ತಡ ಉಂಟಾಗಿತ್ತು ಇದರ ಬೆನ್ನಲ್ಲೇ ಇಡೀ ಅಕ್ರಮದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ಮತ್ತೊಂದೆಡೆ ಯೂನಿಯನ್ ಬ್ಯಾಂಕ್ ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಕೋರಿ ಪತ್ರ ಬರೆದಿತ್ತು.
ಈ ಬೆಳವಣಿಗೆ ನಡುವೆ ಅಕ್ರಮದ ತನಿಖೆಗೆ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ರಚಿಸಿದ್ದ ಎಸ್ಐಟಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಸಚಿವ ಬಿ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ನಾಗೇಶ್ವರರಾವ್ ಅವರನ್ನು ಬಂಧಿಸಿತ್ತು.
ಸಚಿವ ನಾಗೇಂದ್ರ ಅವರ ಆಪ್ತರು ಬಂಧನವಾಗುತ್ತಿದ್ದಂತೆ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿ ಬಳಿಕ ಅಧಿಕಾರಿಗಳಿಂದ ಹಗರಣದ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ನಂತರ ಸಚಿವ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿ ತಕ್ಷಣ ರಾಜೀನಾಮೆ ಕೊಡುವಂತೆ ಸೂಚಿಸಿದರು.
ಸಿಎಂ ಸೂಚನೆ ಮೇರೆಗೆ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದನ್ನು ಅಂಗೀಕರಿಸುವಂತೆ ಸಿದ್ದರಾಮಯ್ಯ ರಾಜ್ಯಪಾಲರಿಗೆ ರವಾನಿಸಿದ್ದಾರೆ. ತನಿಖೆ ಪೂರ್ಣಗೊಂಡ ನಂತರ ನಾಗೇಂದ್ರ ದೋಷಮುಕ್ತರಾಗಿ ಹೊರಬಂದರೆ ಮತ್ತೆ ಸಂಪುಟದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ.
ಮತ್ತೊಂದೆಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಹಣ ವರ್ಗಾವಣೆ ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರವಿರುವ ಬಗ್ಗೆಯೂ ಪುರಾವೆಗಳನ್ನು ಕಲೆಹಾಕಿದೆ. ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಪೂರ್ವ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮಹೇಶ್ ಜೆ. ಅವರ ದೂರು ಆಧರಿಸಿ ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು, ಬಂಧಿತ ಆರೋಪಿಗಳು ಹಾಗೂ ಸಚಿವ ನಾಗೇಂದ್ರ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಈ ನಡುವೆ ಸುದ್ದಿಗೋಷ್ಠಿಯಲ್ಲಿ ತಮ್ಮ ರಾಜಿನಾಮೆ ನಿರ್ಧಾರ ಪ್ರಕಟಿಸಿದ ಸಚಿವ ನಾಗೇಂದ್ರ, ತಾವು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧ ಎಸ್ಐಟಿ ತನಿಖೆ ನಡೆಯುತ್ತಿದೆ. ತಾವು ಸಚಿವ ಸ್ಥಾನದಲ್ಲಿ ಇದ್ದರೆ ತನಿಖೆಯ ಮೇಲೆ ಪ್ರಭಾವ ಬೀರುತ್ತೇನೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಪಾದಿಸಿದ್ದರು. ಹೀಗಾಗಿ ಸುಗಮ ತನಿಖೆಗೆ ಸಹಾಯವಾಗಲಿ ಎಂದು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರು.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಮಗೆ ಯಾವುದೇ ಒತ್ತಡವೂ ಇರಲಿಲ್ಲ ಹಾಗೂ ಯಾರು ಸೂಚಿಸಿಯೂ ಇರಲಿಲ್ಲ. ಸ್ವಯಂ ರಾಜೀನಾಮೆ ಸಲ್ಲಿಸಿದ್ದು ತನಿಖೆ ಮುಗಿದ ನಂತರ ದೋಷಮುಕ್ತನಾಗಿ ಹೊರಬರುತ್ತೇನೆ. ಮತ್ತೆ ಮಂತ್ರಿಯಾಗಿ ನಿಮ್ಮ ಮುಂದೆ ಬರುತ್ತೇನೆ ಎಂದರು.




