ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಮುಕ್ತಾಯ

2 years ago

ಬೆಂಗಳೂರು: ಕೆಲವೆಡೆ ಮತಯಂತ್ರಗಳ ತಾಂತ್ರಿಕ ದೋಷ, ಕೆಲವೆಡೆ ಸಣ್ಣಪುಟ್ಟ ಮಾತಿನ ಚಟುವಟಿ, ಘರ್ಷಣೆ ಮತ್ತು ಮತಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದೆ ಎಂಬ ಕಾರಣಕ್ಕೆ ಕೆಲವರ ಆಕ್ರೋಶ, ಅಸಮಾಧಾನ ಹೊರತುಪಡಿಸಿದರೆ ರಾಜ್ಯದಲ್ಲಿ ಲೋಕಸಭೆಯ 14 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಮತದಾನ ಸಂಪೂರ್ಣ ಶಾಂತಿಯುತವಾಗಿ ಮುಕ್ತಾಯವಾಗಿದೆ.

ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬೆಳಗ್ಗೆ ಚುರುಕಿನಿಂದ ಮತದಾನ ನಡೆದರೆ ಮಧ್ಯಾಹ್ನದ ವೇಳೆಗೆ ಸಂಪೂರ್ಣ ನೀರಸವಾಗಿತ್ತು. ಸಂಜೆ ವೇಳೆಗೆ ಮತ್ತೆ ಚುರುಕು ಪಡೆದುಕೊಂಡಿತ್ತು. ಆದರೆ ಬಹುತೇಕ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಮತದಾನ ಅಂತ್ಯಗೊಳ್ಳುವವರೆಗೆ ಮತದಾರರು ಅತ್ಯುತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಕ್ಕು ಚಲಾಯಿಸಿದರು.

ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ನವ ಮತದಾರರು ಹೆಚ್ಚಿನ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದರೆ, ಹಿರಿಯ ನಾಗರಿಕರು ಮತ್ತು ಹಿರಿಯ ನಾಗರಿಕರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಪ್ರಾಥಮಿಕ ವರದಿಗಳ ಪ್ರಕಾರ ಒಟ್ಟಾರೆ ರಾಜ್ಯದಲ್ಲಿ 65 ರಿಂದ 68ರಷ್ಟು ಮತದಾನವಾಗಿದೆ. ನಾಳೆ ಬೆಳಗ್ಗೆ ಶೇಕಡಾವಾರು ಮತದಾನದ ಪ್ರಮಾಣ ಖಚಿತವಾಗಿ ಲಭ್ಯವಾಗಲಿದೆ.

ರಾಜಧಾನಿ ಮಹಾನಗರ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಭಾಗಶಃ ಇನ್ನೆರಡು ಲೋಕಸಭಾ ಕ್ಷೇತ್ರಗಳು ವ್ಯಾಪಿಸುವ ಪ್ರದೇಶಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದಲೇ ಮತಗಟ್ಟೆ ಬಳಿ ಜನ ಸಾಲುಗಟ್ಟಿ ನಿಂತಿದ್ದರು. ಬಹುತೇಕ ಕಡೆ ಹೆಚ್ಚಾಗಿ ಹಿರಿಯ ನಾಗರಿಕರು ಮೊದಲು ಬಂದು ಮತ ಹಾಕುವುದಕ್ಕೆ ಸರದಿಯಲ್ಲಿ ನಿಂತಿದ್ದರು. ನಗರದಾದ್ಯಂತ ಬೆಳಗಿನಿಂದ ಜನರು ಉತ್ಸಾಹದಿಂದಲೇ ಮತ ಚಲಾಯಿಸಲು ಆಗಮಿಸಿದರು.

ಬೆಳಿಗ್ಗೆ 8 ರಿಂದ 9 ಗಂಟೆ ಒಳಗೆ ಹೆಚ್ಚು ಹಿರಿಯ ನಾಗರಿಕರು ಮತ ಚಲಾಯಿಸಿದ್ದರು. ಕೆಲವರು ಕೋಲು ಊರಿಕೊಂಡು, ಇನ್ನೂ ಕೆಲವರು ಕುಟುಂಬದವರ ಆಸರೆಯೊಂದಿಗೆ ಹಾಗೂ ಗಾಲಿ ಕುರ್ಚಿಯಲ್ಲಿ ಕುಳಿತು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ಗಣೇಶ್, ದುನಿಯಾ ವಿಜಯ್, ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ಯುವ, ವಿನಯ್ ರಾಜಕುಮಾರ್, ಮುರಳಿ, ರವಿಚಂದ್ರನ್, ದೊಡ್ಡಣ್ಣ, ಅಮೂಲ್ಯ, ಸಪ್ತಮಿಗೌಡ, ರಾಗಿಣಿ, ಡಾಲಿ ಧನಂಜಯ, ಕ್ರಿಕೆಟಿಗ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನಟ–ರಾಜಕಾರಣಿ ಜಗ್ಗೇಶ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ಕುಟುಂಬ ಸಹಿತ ಮತಗಟ್ಟೆಗೆ ಬಂದು ಮತಚಲಾಯಿಸಿದರು.

ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಎಲ್ಲ ಮತದಾರರು ಮತಗಟ್ಟೆಗೆ ಬಂದು ಮತಚಲಾಯಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದರು.

ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥ ನಾರಾಯಣಮೂರ್ತಿ – ಸುಧಾ ಮೂರ್ತಿ ದಂಪತಿ ಒಟ್ಟಾಗಿ ಬಂದು ಮತದಾನ ಪ್ರಕ್ರಿಯೆಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಸುಧಾ ಮೂರ್ತಿ, ಹಿಂದೆ ಕೂತು ಮಾತನಾಡುವ ಬದಲು, ಮತಗಟ್ಟೆಗೆ ಬಂದು ಮತಚಲಾಯಿಸಿ ಮಾತನಾಡಿ. ಯುವಕರು ಹಿರಿಯರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಿ. ನಂತರ ನೀವು ಮತದಾನ ಮಾಡಿ ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ಮತ್ತು ಕುಟುಂಬ ಸದಸ್ಯರೊಂದಿಗೆ ಹಕ್ಕು ಚಲಾಯಿಸಿದರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ನಾಯಕರು ಮತದಾನ ಮಾಡಿದರು.

ಇವಿಎಂಗೆ ಹಾನಿ: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದಾರೆ. ಇದರಿಂದ ಕೆಲ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಮತ್ತು ಗ್ರಾಮಸ್ಥರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅರಣ್ಯದೊಳಗೆ ಇರುವ ಈ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಈ ಹಿಂದೆಯೇ ಮತದಾನ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಹೇಳಿದ್ದರು. ಅಧಿಕಾರಿಗಳು ಜನರ ಮನವೊಲಿಸಲು ಯತ್ನಿಸಿದ್ದರು. ಹಾಗಿದ್ದರೂ ಶುಕ್ರವಾರ ಬೆಳಿಗ್ಗೆಯಿಂದ ಯಾರೊಬ್ಬರೂ ಮತಗಟ್ಟೆಯತ್ತ ಸುಳಿದಿರಲಿಲ್ಲ.

ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮದ ಮತಗಟ್ಟೆಯಲ್ಲಿ 528 ಮತದಾರಿದ್ದಾರೆ. ಇಂಡಿಗನತ್ತ ಗ್ರಾಮಸ್ಥರು ಮತದಾನಕ್ಕೆ ಮುಂದಾಗದೇ ಇರುವುದರಿಂದ ಅಧಿಕಾರಿಗಳು ಮೆಂದಾರೆ ಗ್ರಾಮದಲ್ಲಿರುವ ಗಿರಿಜನರ ಮನವೊಲಿಸಿ ಮತದಾನ ಮಾಡಲು ಯತ್ನಿಸಿದರು. ಕೆಲವರು ಬಂದು ಮತ ಚಲಾಯಿಸಿದರು.

ಈ ವೇಳೆ ಇಂಡಿಗನತ್ತ ಗ್ರಾಮಸ್ಥರು, ‘ನೀವು ಜನರನ್ನು ಹೆದರಿಸಿ, ಬೆದರಿಸಿ ಮತ ಹಾಕಿಸುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸರು ಲಾಠಿಚಾರ್ಜ್ಗೆ ಮುಂದಾದಾಗ ಗ್ರಾಮಸ್ಥರು ಮತಗಟ್ಟೆ ಮೇಲೆ ಕಲ್ಲು ತೂರಾಟ ನಡೆಸಿದರು. ಮತಗಟ್ಟೆ ಒಳಕ್ಕೆ ನುಗ್ಗಿ ಇವಿಎಂ ಹಾಗೂ ಇತರ ಪರಿಕರಗಳನ್ನು ಕೆಳಕ್ಕೆ ಎಸೆದು ಹಾನಿಗೊಳಿಸಿದರು.

ಪೊಲೀಸರು ಹಾಗೂ ಅಲ್ಲಿರುವ ಸಿಬ್ಬಂದಿಗೂ ಸಣ್ಣಪುಟ್ಟ ಏಟಾಗಿದೆ. ತಹಶೀಲ್ದಾರ್ ಗುರುಪ್ರಸಾದ್ ಅವರಿಗೂ ಗಾಯವಾಗಿದೆ. ಎಲ್ಲರೂ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಚೊಂಬು ಸಿಲಿಂಡರ್: ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಜುನಾಥ ನಗರ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮತ ಹಾಕಲು ಅವರು ಕಾಲಿ ಚೊಂಬು ಮತ್ತು ಸಿಲಿಂಡರ್ ಹೊತ್ತು ಬಂದು ಗಮನ ಸೆಳೆದರು. ಕೇಂದ್ರ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಚೊಂಬು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಶೇಕಡ ನೂರರಷ್ಟು ಮತದಾನ: ಬೆಳ್ತಂಗಡಿ ತಾಲ್ಲೂಕು ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿರುವ ಈ ಊರಿನ ಮತಗಟ್ಟೆಯಲ್ಲಿ 111 ಜನ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಸಂಜೆ 4ರ ವೇಳೆಗೆ ಎಲ್ಲರೂ ಮತದಾನ ಮಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಶೇ 99ರಷ್ಟು ಮತದಾನವಾಗಿತ್ತು. ಒಬ್ಬರು ಮತ ಚಲಾಯಿಸಿರಲಿಲ್ಲ.

ಮತದಾನದ ವಿವರ:
ಉಡುಪಿ– ಚಿಕ್ಕಮಗಳೂರು: ಶೇ 67.49
ಹಾಸನ: ಶೇ 65.92
ದಕ್ಷಿಣ ಕನ್ನಡ: ಶೇ 68.76
ಚಿತ್ರದುರ್ಗ: ಶೇ 72.14
ತುಮಕೂರು: 66.62
ಮಂಡ್ಯ: 77.44
ಮೈಸೂರು: 73.55
ಚಾಮರಾಜನಗರ: 74.82
ಬೆಂಗಳೂರು ಗ್ರಾಮಾಂತರ: 69.62
ಬೆಂಗಳೂರು ಉತ್ತರ: 61.12
ಬೆಂಗಳೂರು ಕೇಂದ್ರ: 60.10
ಬೆಂಗಳೂರು ದಕ್ಷಿಣ: 60.77
ಚಿಕ್ಕಬಳ್ಳಾಪುರ: 75.90
ಕೋಲಾರ: 74.6

Leave a Reply