ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದ ಬೆನ್ನಲ್ಲೇ ಎಫ್ಐಆರ್ ದಾಖಲಿಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸಿಎಂ ವಿರುದ್ಧ ದೂರುದಾರರಲ್ಲಿ ಒಬ್ಬರಾದ ಜೆಡಿಎಸ್ ಮುಖಂಡ ಎಸ್.ಪಿ. ಪ್ರದೀಪ್ಕುಮಾರ್ ಅವರು ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರಿಗೆ ಮನವಿ ಮಾಡಿದ್ದಾರೆ.
ಜೆಡಿಎಸ್ ಮುಖಂಡರೊಂದಿಗೆ ಲೋಕಾಯುಕ್ತ ಕಚೇರಿಗೆ ಬಂದ ಅವರು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ನಿನ್ನೆ ಪ್ರಕಟಿಸಿದ ತೀರ್ಪಿನ ಪ್ರತಿಯೊಂದಿಗೆ ದೂರು ಸಲ್ಲಿಸಿದರು.
ಇದಕ್ಕೆ ಪ್ರತಿಯಾಗಿ ಅವರಿಗೆ ಸ್ವೀಕೃತಿ ನೀಡಲಾಯಿತು. ಆದರೆ, ಇದನ್ನು ಒಪ್ಪದ ಅವರು, ನಾನು ಹಿಂದೆ ಸಲ್ಲಿಸಿದ್ದ ದೂರು ಆಧರಿಸಿ ಕೈಗೊಂಡ ಕ್ರಮದ ಬಗ್ಗೆ ಹಿಂಬರಹ ಕೊಡಬೇಕು ಎಂದು ಪಟ್ಟುಹಿಡಿದರು. ಆಗ ಅಧಿಕಾರಿಗಳು ಈಗ ಕೊಡುವುದಕ್ಕೆ ಬರುವುದಿಲ್ಲ ಎಂದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರದೀಪ್ಕುಮಾರ್, ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ, ಭಾಮೈದ ಮಲ್ಲಿಕಾರ್ಜುನಸ್ವಾಮಿ ಹಾಗೂ ಅಕ್ರಮದಲ್ಲಿ ಭಾಗಿಯಾದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸುವಂತೆ ದೂರು ಸಲ್ಲಿಸಿದ್ದೇನೆ ಎಂದರು.
ಹೈಕೋರ್ಟ್ ಮಂಗಳವಾರ ನೀಡಿರುವ ತೀರ್ಪಿನ ಪ್ರಕಾರ, ನಾನು ಜುಲೈ 31ರಂದು ಹಾಗೂ ಆ.19ರಂದು ಸಲ್ಲಿಸಿರುವ ದೂರುಗಳನ್ನು ಆಧರಿಸಿ ಎಫ್ಐಆರ್ ದಾಖಲಿಸಲು ಅವಕಾಶವಿದೆ. ನ್ಯಾಯಾಲಯವೇ ಹೇಳಿರುವಂತೆ ಪೂರ್ವ ಅನುಮತಿಯೇನೂ ಬೇಕಾಗುವುದಿಲ್ಲ. ಆದ್ದರಿಂದ ತನಿಖೆಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ ಎಂದರು.
ಈ ಕ್ಷಣದಲ್ಲೇ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದೆ. ಪ್ರತಿಕ್ರಿಯಿಸಿದ ಅಧಿಕಾರಿ, ತೀರ್ಪಿನ ಪ್ರತಿ ಓದಲು ಸಮಯಬೇಕಾಗುತ್ತದೆ ಎಂದರು. ಪ್ರತಿ ಕೊಟ್ಟಿದ್ದೇನೆ, ಓದಿ ಮನವರಿಕೆ ಮಾಡಿಕೊಡುತ್ತೇನೆ ಎಂದರೂ ಕೇಳಲಿಲ್ಲ. ನಾನು ಹಿಂದೆ ನೀಡಿದ ದೂರುಗಳನ್ನು ಆಧರಿಸಿಯೂ ಕ್ರಮ ಕೈಗೊಂಡಿಲ್ಲ. ಈಗ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಎಫ್ಐಆರ್ ಮಾಡಿ, ಆರೋಪಿಗಳನ್ನು ಬಂಧಿಸಬೇಕು ಎನ್ನುವುದು ನನ್ನ ಒತ್ತಾಯ. ಆದರೆ, ಲೋಕಾಯುಕ್ತ ಅಧಿಕಾರಿಗಳು ದುರ್ವರ್ತನೆ ತೋರುತ್ತಿದ್ದಾರೆ. ಅವರು ಸಿಎಂ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಎಫ್ಐಆರ್ ದಾಖಲಿಸುವುದಕ್ಕೆ ಯಾವುದೇ ತಡೆಯಾಜ್ಞೆ ಕೂಡ ಇಲ್ಲ. ಆದರೆ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿದ್ದಾರೆ. ಹಿಂಬರಹ ನೀಡದೇ ಹಾರಿಕೆ ಉತ್ತರ ಕೊಡುತ್ತಿದ್ದಾರೆ ಎಂದರು.
ನಾನು ಮೊದಲ ದೂರು ಸಲ್ಲಿಸಿದ್ದಾಗ ಅಧಿಕಾರಿಯೇ ಬೇರೆ. ಈಗಿರುವ ಅಧಿಕಾರಿಯೇ ಬೇರೆ. ಮೈಸೂರು ಲೋಕಾಯುಕ್ತ ಎಸ್ಪಿ ವರ್ಗಾವಣೆಯಲ್ಲಿ ದುರುದ್ದೇಶಪೂರ್ವಕ ಕ್ರಮ ಕಂಡುಬರುತ್ತಿದೆ ಎಂದರು.
ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿ, ಪ್ರಕರಣ ದಾಖಲಿಸುವಂತೆ ನಿರ್ದೇಶನ ಕೊಡಿಸುವ ಕೆಲಸ ಮಾಡುತ್ತೇನೆ. ಎಫ್ಐಆರ್ ದಾಖಲಾದ ಮೇಲೆ, ಲೋಕಾಯುಕ್ತದ ಮೇಲೆ ನಮಗೆ ನಂಬಿಕೆ ಇಲ್ಲವಾದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಕೇಳುತ್ತೇನೆ ಎಂದರು.
ಜೆಡಿಎಸ್ ರಾಜ್ಯ ಘಟಕದ ವಕ್ತಾರ ರವಿಚಂದ್ರೇಗೌಡ, ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯ ಎಸ್ಬಿಎಂ ಮಂಜು ಸೇರಿದಂತೆ ಜೆಡಿಎಸ್ ಮುಖಂಡರು ಜೊತೆಗಿದ್ದರು.




