ಹಾಸನ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

2 years ago

ಹಾಸನ: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಪೂರ್ವ ಸಿದ್ಧತೆ ಹಾಗೂ ಚುನಾವಣೆ ರಣತಂತ್ರ ರೂಪಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ರಣರಂಗವಾಗಿ ಪರಿವರ್ತನೆಯಾಯಿತು.

ಅಭ್ಯರ್ಥಿ ಆಯ್ಕೆ ಕುರಿತು ಕಾರ್ಯಕರ್ತರ ಅಭಿಪ್ರಾಯ ಕೇಳಲು ಆಯೋಜಿಸಿದ್ದ ಸಭೆಯಲ್ಲಿ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆಯಿತು. ಕಾರ್ಯಕರ್ತರ ಸಭೆಯನ್ನುದ್ದೇಶಿಸಿ, ಮಾಜಿ ಸಚಿವ ಬಿ ಶಿವರಾಂ ಮಾತನಾಡುತ್ತಿದ್ದರು. ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಭೆಯಲ್ಲಿ ಮತೊಬ್ಬ ಟಿಕೆಟ್ ಆಕಾಂಕ್ಷಿ ಜತ್ತೇನಹಳ್ಳಿ ರಾಮಚಂದ್ರ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಇದೇ ಸಭೆಗೆ ಸ್ಥಳೀಯ ಮುಖಂಡ ಹಾಗೂ ಕಳೆದ ವಿಧಾನಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ರಾನೈಟ್ ರಾಜಶೇಖರ್ ಸಹ ಬಂದಿದ್ದರು.

ಸಭೆಯಲ್ಲಿ ಮಾತನಾಡುತ್ತಿದ್ದ ಬಿ ಶಿವರಾಂ, ನಮ್ಮ ಕಾರ್ಯಕರ್ತರು, ಮುಖಂಡರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಬೇಲೂರಿನಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದರು. ಇದರಿಂದ ಕೆರಳಿದ ರಾಜಶೇಖರ್ ಬೆಂಬಲಿಗರು, ಶಿವರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗತೊಡಗಿದರು.

ಪ್ರತಿಯಾಗಿ ಶಿವರಾಂ ಬೆಂಬಲಿಗರು ಘೋಷಣೆ ಕೂಗಿದರು. ಜೊತೆಗೆ ಉಭಯ ನಾಯಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಉಂಟಾಯಿತು. ಚಕಮಕಿ ವಿಕೋಪಕ್ಕೆ ಹೋಗಿ ಇಬ್ಬರು ನಾಯಕರ ಬೆಂಬಲಿಗರು ಕೈಕೈ ಮಿಲಾಯಿಸಿದರು, ಕುರ್ಚಿಗಳನ್ನು ಹಿಡಿದು ಹೊಡೆದಾಡಿದರು. ಘಟನೆಯಲ್ಲಿ ಹತ್ತಾರು ಕುರ್ಚಿಗಳು ಪುಡಿಯಾಗಿವೆ. ಗಲಾಟೆ ಜೋರಾಗುತ್ತಿದ್ದಂತೆ ನಾಯಕರು ಸಭೆಯಿಂದ ಕಾಲ್ಕಿತ್ತರು. ಗಲಾಟೆಯಲ್ಲಿ ಹಲವರು ಗಾಯಗೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply