ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ದ್ರಾವಿಡ ಜನಾಂಗಗಳ ಸಾಂಸ್ಕೃತಿಕ ಪ್ರತೀಕವಾದ ತಮಟೆಯ ಗಸ್ತಿಗಳನ್ನು ಸಾಗರದಾಚೆಯ ದೇಶಗಳಲ್ಲಿ ಮೊಳಗಿಸಿದವರು. ನೆಲಸಂಸ್ಕೃತಿಯ ಕಸುವಿನಲ್ಲಿ ಅರಳಿದ ತಮಟೆವಾದನದ ದೇಸಿ ಸಂಗೀತದ ಕಲೆಯ ಸೊಗಡು ಮತ್ತು ಸೊಬಗಿನ ರುಚಿಯನ್ನು ಲಕ್ಷಾಂತರ ಜನರಿಗೆ ಉಣಬಡಿಸಿದ ಪಿ.ಮುನಿವೆಂಕಟಪ್ಪ, ಚರ್ಮದ ತಮಟೆಯ ವಾದನವನ್ನು ಊರ ಜಾತ್ರೆ, ಮದುವೆ ಮುಂಜಿ ಮಸಣ, ಹಬ್ಬ ಉತ್ಸವ, ಸಾಮಾಜಿಕ ಚಳವಳಿ, ದೇವರು ದಿಂಡಿರ ಮೆರವಣಿಗೆ ಹೀಗೆ ಬದುಕಿನ ಎಲ್ಲಾ ಪ್ರಮುಖ ಘಟ್ಟಗಳಲ್ಲಿ ಬೆಸೆದುಕೊಂಡು ಬಾಳತ್ತಾ ಜನರ ಜೀವಭಾವಗಳನ್ನು ಮಿಡಿಸಿದವರು.
ತಮಟೆ ಕಲೆಯನ್ನು ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆಯುವ ಮಟ್ಟಿಗೆ ತನ್ನ ಉಸಿರಾಗಿಸಿಕೊಂಡವರು. ‘ತಮಟೆ ನುಡಿಕಾರ’ನಾಗಿ ತಮಟೆ ವಾದನವನ್ನು ತನ್ನ ಬದುಕಿನ ಶ್ರದ್ಧೆಯಾಗಿಸಿಕೊಂಡು ತಮಟೆ ನುಡಿಸುವ ನೆಲಜೀವಿಗಳ ಸಾಂಸ್ಕೃತಿಕ ಘನತೆಯನ್ನು ಬೆಳಗುವ ಹಾಗೂ ತಮಟೆ ವಾದ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಮನ್ನಣೆಯನ್ನು ತಂದುಕೊಟ್ಟ ಶ್ರೇಷ್ಠ ಕಲಾವಿದ ಪಿ.ಮುನಿವೆಂಕಟಪ್ಪ. ಇವರು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರತಿಷ್ಠಿತ ನಾಡೋಜ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಇದೀಗ ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿರುತ್ತದೆ.
ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ 1947 ರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ (ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ) ಶಿಡ್ಲಘಟ್ಟ ತಾಲೂಕಿನ ಪಿಂಡಿಪಾಪನಹಳ್ಳಿ ಎಂಬ ಕುಗ್ರಾಮದ ಕಡುಬಡತನದ ದಲಿತ ಕೂಲಿಕಾರರ ಕುಟುಂಬದಲ್ಲಿ ಪಾಪಣ್ಣ ಮತ್ತು ಮುನಿಗಂಗಮ್ಮ ಎಂಬ ದಂಪತಿಗಳ ಮಗನಾಗಿ ಹುಟ್ಟಿದ ಮುನಿವೆಂಕಟಪ್ಪನವರಿಗೆ ತಮಟೆ ವಾದನ ಕಲೆಯು ಅವರ ತಂದೆಯಿಂದ ಬಂದ ಬಳುವಳಿ.
ಸರಕು ಸಂಸ್ಕೃತಿಯ ಚಿನ್ನದ ಕತ್ತಿಯ ವರಸೆಗಳು ನಾಗರಿಕ ಬದುಕಿನ ಸಹಜ ಶೃತಿಲಯಗಳನ್ನು ತಪ್ಪಿಸಿರುವ ಯಾಂತ್ರೀಕರಣದ ಈ ಹೊತ್ತಿನಲ್ಲಿ ಮುನಿವೆಂಕಟಪ್ಪನವರ ಚರ್ಮದ ತಮಟೆಗೆ ದಲಿತ ಲೋಕದ ಆದಿಮ ಲಯಗಳು ಗೋರಿಯಿಂದ ಜೀವಪಡೆದು ಒಲಿದು ಬಂದಿವೆ. ಆದಿಮ ದ್ರಾವಿಡಪೂರ್ವ ಪರಂಪರೆಯ ಸಂಗೀತ ವಾದ್ಯವಾಗಿರುವ ತಮಟೆಗೆ ಅದರೆಲ್ಲಾ ಪೂರ್ವದ ಸಾಂಸ್ಕೃತಿಕ ಘನತೆಯನ್ನು ತಂದುಕೊಟ್ಟಿರುವ ಮಾಂತ್ರಿಕ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ನಾಳೆ ಫೆಬ್ರವರಿ 25ರ ಶನಿವಾರ ಸಂಜೆ 4:30 ಕ್ಕೆ ಸರಿಯಾಗಿ ಬೆಂಗಳೂರು ಮಹಾನಗರದ ಸಂಸ ಬಯಲು ರಂಗಮಂದಿರದಲ್ಲಿ (ರವೀಂದ್ರ ಕಲಾಕ್ಷೇತ್ರದ ಹಿಂಭಾಗ) ನಾಗರಿಕ ಗೌರವ ಸಮರ್ಪಣಾ ಸಮಾರಂಭವನ್ನು ಆಯೋಜಿಸಲಾಗಿದೆ. ಇಂಡಿಯನ್ ಫೋಕ್ ಬ್ಯಾಂಡ್ & ಜಂಬೆ ಝಲಕ್ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ನೀವು ಬನ್ನಿ. ನಿಮ್ಮ ಗೆಳೆಯ ಗೆಳತಿ ಫ್ರೆಂಡತಿ ಮುಂತಾದವರನ್ನೂ ಕರೆತನ್ನಿ
ಪ್ರೀತಿಯಿಂದ,
ಡಾ.ವಡ್ಡಗೆರೆ ನಾಗರಾಜಯ್ಯ, 8722724174



