2 ದಿನ ಡೆಡ್ ಲೈನ್: ಸ್ಪಂದಿಸದೇ ಹೋದಲ್ಲಿ ಫೆ.02 ರಂದು ಸಿಎಂ ಮನೆ ಮುಂದೆ ಪ್ರತಿಭಟನೆ

3 years ago

ಬೆಂಗಳೂರು: ಬೇಡಿಕೆಗಳನ್ನು ಈಡೇರಿಸಬೇಕೆಂದು ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಜನವರಿ 23ರಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಧರಣಿ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದ್ದು, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಅಧ್ಯಕ್ಷ ಎಸ್. ವರಲಕ್ಷ್ಮಿ ಅವರು ಸರ್ಕಾರ ಎರಡು ದಿನಗಳ ಕಾಲಾವಕಾಶ ನೀಡಿದ್ದಾರೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್. ವರಲಕ್ಷ್ಮಿ, ಕಳೆದ 8 ದಿನಗಳಿಂದ ಐತಿಹಾಸಿಕ ಹೋರಾಟ ನಡೆಸಿದ್ದೇವೆ. ಸರಕಾರ ಇಲ್ಲಿಯವರೆಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ. ಸರಕಾರದ ಈ ನಡೆ ಖಂಡಿಸಿ ಫೆಬ್ರವರಿ 02ರಂದು ಮುಖ್ಯಮಂತ್ರಿ ಮನೆ ಚಲೋ ನಡೆಸಲಿದ್ದೇವೆ ಎಂದು ಕರೆ ನೀಡಿದರು.

ಇಂದು ಧರಣಿ ಸ್ಥಳಕ್ಕೆ ಆಗಮಿಸಿದ್ದ ಸಚಿವರು, ಬೇಡಿಕೆಗಳ ಈಡೇರಿಕೆಗೆ ಪ್ರಯತ್ನ ಮಾಡುತ್ತೇವೆ ಎಂದಷ್ಟೆ ಹೇಳಿದರೆ ಹೊರತು ಖಚಿತ ಭರವಸೆ ನೀಡಲಿಲ್ಲ. ಹಾಗಾಗಿ ಈ ಹೋರಾಟ ಮುಂದುವರೆಯಲಿದೆ ಎಂದರು.

ಹಲವರು ನಾವು ಹಠಕ್ಕೆ ಬಿದ್ದಿದ್ದೇವೆ ಎಂದು ಪ್ರಶ್ನಿಸುತ್ತಿದ್ದಾರೆ. ನಾವು ಹಠಕ್ಕೆ ಬಿದ್ದಲ್ಲ. ನಮ್ಮ ಬೇಡಿಕೆ ಈಡೇರುವುದು ಮುಖ್ಯ. ನಾವು ಕೇಳುತ್ತಿರುವ ಬೇಡಿಕೆಗಳು ಸರಕಾರಕ್ಕೆ ಹೊರೆಯಲ್ಲ. ಆದೇಶ ಮಾಡಬಹುದಾದ ಬೇಡಿಕೆಗಳನ್ನೇ ನಾವು ಕೇಳುತ್ತಿದ್ದೇವೆ ಎಂದರು.

ನಮ್ಮ ಪ್ರಮುಖ ಬೇಡಿಕೆಗಳಿರುವುದು ಅಂಗನವಾಡಿ ಕಾರ್ಯಕರ್ತೆಯನ್ನು ಶಿಕ್ಷಕಿ ಎಂದು ಪರಿಗಣಿಸಬೇಕು. ಕೆಲಸದ ಹೊರೆ ಕಡಿಮೆ ಮಾಡಬೇಕು. ಅಂಗನವಾಡಿ ಕಟ್ಟಡಗಳನ್ನು ಬಲಪಡಿಸಬೇಕು. ಅಂಗನವಾಡಿ ಬಿಡುವಾಗ ಮಗುವಿಗೆ ವರ್ಗಾವಣೆ ಪತ್ರ(ಟಿಸಿ) ನೀಡುವ ವ್ಯವಸ್ಥೆಯಾಗಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ನಮಗೆ ಗ್ರಾಚ್ಯೂಟಿ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರಕಾರ ಈಡೇರಿಸಲು ಸಾಧ್ಯವಿದೆ ಎಂದರು.

ಮುಷ್ಕರ ಮಾಡುವುದು ನಮ್ಮ ಹಕ್ಕು, ನಮ್ಮ ಬೇಡಿಕೆಗಳನ್ನು ಈಡೇರಿಸುವುದು ಸರಕಾರದ ಕರ್ತವ್ಯ. ಸರಕಾರ ಕೇವಲ ಮಾತುಕತೆಯ ಬದಲಾಗಿ ನಮ್ಮ ಬೇಡಿಕೆಗಳನ್ನು ಆದೇಶವಾಗಿ ತರಬೇಕು. ಆಗಲೇ ನಮ್ಮ ಈ ಅನಿರ್ದಿಷ್ಟಾವಧಿ ಹೋರಾಟವನ್ನು ನಿಲ್ಲಿಸಲಿದ್ದೇವೆಂದು ಸ್ಪಷ್ಟವಾಗಿ ತಿಳಿಸಿದರು.

ನಾವು ಧರಣಿಯನ್ನು 10 ದಿನ ಶಾಂತಿಯುತವಾಗಿ ನಡೆಸಲು ನಿರ್ಧರಿಸಿದ್ದೇವೆ. ಹಾಗಾಗಿ ಇನ್ನೂ ಎರಡು ದಿನ ಬಾಕಿ ಇದೆ. ಸರಕಾರ ಸ್ಪಂದಿಸದೇ ಹೋದರೆ ಫೆಬ್ರವರಿ 02 ರಂದು ಮುಖ್ಯಮಂತ್ರಿ ಮನೆ ಚಲೋ ನಡೆಸಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದಾ, ಶಾಂತಾ ಎನ್ ಘಂಟೆ, ಜಿ. ಕಮಲ ಉಪಸ್ಥಿತರಿದ್ದರು.

Leave a Reply