ರಾಜಭವನಕ್ಕೆ ಹುಸಿ ಬಾಂಬ್ ಕರೆ

2 years ago

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಸುಮಾರು 48 ಶಾಲೆಗಳ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ನಿಗೂಢ ತಾಣದಿಂದ ಈಮೇಲ್‌ ಮಾಡಿ ಭಾರಿ ಆತಂಕಕ್ಕೆ ಕಾರಣವಾದ ಬೆನ್ನಲ್ಲೇ ರಾಜ್ಯದ ಶಕ್ತಿ ಕೇಂದ್ರ ರಾಜ ಭವನಕ್ಕ ಬಾಂಬ್‌ ಬೆದರಿಕೆ ಬಂದಿದೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿ ಬೆದರಿಕೆ ಹಾಕಿದ್ದಾನೆ. ಕರೆ ಬಂದ ತಕ್ಷಣ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳು ಶ್ವಾನದಳದ ಜೊತೆಗೆ ಧಾವಿಸಿ ಪರಿಶೀಲನೆ ನಡೆಸಿದರು. ರಾಜಭವನದಲ್ಲಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿಲ್ಲ. ತಪಾಸಣೆಯಲ್ಲಿ ಅದು ಹುಸಿ ಕರೆ ಎನ್ನುವುದು ಗೊತ್ತಾಗಿದೆ.

ಆದರೂ, ಬೆದರಿಕೆ ಕರೆ ಹಿನ್ನೆಲೆಯಲ್ಲಿ ಇನ್ನೂ ಕಟ್ಟೆಚ್ಚರ ವಹಿಸಿದ್ದಾರೆ. ರಾಜಭವನ ತುಂಬ ವಿಶಾಲ ಜಾಗವಾಗಿದ್ದು ಯಾವ ಭಾಗದಲ್ಲಿ ಇಡಲಾಗಿದೆ ಎಂಬ ಮಾಹಿತಿಯನ್ನು ಆತ ನೀಡಿಲ್ಲ. ರಾಜಭವನದಲ್ಲಿ ರಾಜ್ಯಪಾಲರು ಮತ್ತು ಸಾಕಷ್ಟು ಸಿಬ್ಬಂದಿ ಇರುತ್ತಾರೆ. ಜತೆಗೆ ಸಾಕಷ್ಟು ಸಂದರ್ಶಕರು ಬರುತ್ತಿರುತ್ತಾರೆ. ಇದೊಂದು ಹುಸಿ ಕರೆಯೇ ಆಗಿರಬಹುದಾದ ಸಾಧ್ಯತೆ ಹೆಚ್ಚಿದೆ. ಆದರೆ, ಅದನ್ನು ಪೊಲೀಸರು ನಿರ್ಲಕ್ಷ್ಯ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ಕಡೆ ತಪಾಸಣೆ ನಡೆಸಲಾಗಿದೆ.

ಈ ನಡುವೆ, ರಾಜಭವನಕ್ಕೆ ಯಾವ ನಂಬರ್‌ನಿಂದ ಕರೆ ಮಾಡಲಾಗಿದೆ ಎಂಬುದನ್ನು ಪತ್ತೆ ಮಾಡಲು ಮುಂದಾಗಿದ್ದು, ಕರೆ ಮಾಡಿರುವವರು ಯಾರು ಎಂಬ ವಿಚಾರದಲ್ಲಿ ಪೊಲೀಸರು ತನಿಖೆ ‌ ನಡೆಸುತ್ತಿದ್ದಾರೆ. ಇದೊಂದು ಫೋನ್‌ ಕರೆ ಆಗಿರುವುದರಿಂದ ಆರೋಪಿಯನ್ನು ಪತ್ತೆ ಹಚ್ಚುವ ಸಾಧ್ಯತೆಗಳಿವೆ ಎನ್ನಲಾಗಿದೆ.

Leave a Reply