ಮಾಜಿ ಸಿಎಂ ಜೆ.ಹೆಚ್.ಪಟೇಲ್ ಜನ್ಮದಿನಾಚರಣೆ ಮತ್ತು ಜೆ.ಹೆಚ್.ಪಟೇಲ್ ಪ್ರಶಸ್ತಿ ಪ್ರದಾನ
ಬೆಂಗಳೂರು: ಪ್ರತಿಯೊಬ್ಬರು ಉತ್ತಮ ಪ್ರಜೆಯಾಗಿ ಬದುಕಬೇಕು. ಸತ್ತ ಮೇಲೆ ಸ್ವಲ್ಪ ಜನ ಬದುಕುತ್ತಾರೆ, ಅವರು ಮಾಡಿದ ಸೇವೆ ನಿರಂತರವಾಗಿರುತ್ತದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನ ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಮಾಜಿ ಸಿಎಂ, ಜೆ.ಹೆಚ್.ಪಟೇಲ್ ಜನ್ಮದಿನಾಚರಣೆ ಮತ್ತು ಜೆ.ಹೆಚ್.ಪಟೇಲ್ ಪ್ರಶಸ್ತಿ-2022 ಪ್ರಧಾನ ಸಮಾರಂಭದಲ್ಲಿ ಮಾತಾಡಿದ ಅವರು, ಖಾದಿ, ಖಾವಿ, ಖಾಕಿ ಧರಿಸಿದರವರಿಗೆ ಈ ಹಿಂದೆ ಗೌರವ ಕೊಡುತ್ತಿದ್ದರು. ಆದರೆ ಇಂದು ಬಟ್ಟೆಗೆ ಗೌರವವಿದೆ. ಅದನ್ನ ಧರಿಸಿದವರ ಮೇಲೆ ಗೌರವವಿಲ್ಲದ ಭಾವನೆ ಇದೆ ಎಂದರು.
ಜೆ.ಹೆಚ್.ಪಟೇಲ್ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿವುಳ್ಳರಾಗಿದ್ದರು. ಮೌಲ್ಯಗಳನ್ನು ಇಟ್ಟುಕೊಂಡು ಯಾರು ಬದುಕುತ್ತಾರೆ ಅವರ ಸತ್ತ ಮೇಲು ಬದುಕುತ್ತಾರೆ. ಜೆ.ಹೆಚ್.ಪಟೇಲ್ ಶ್ರೀಮಂತರ ಮನೆಯಲ್ಲಿ ಹುಟ್ಟಿದರು. ಆದರು ಜನಸಾಮಾನ್ಯರ ಜೊತೆಯಲ್ಲಿ ಬದುಕಿದರು. ಅವರ ನೋವುಗಳಿಗೆ ಸ್ಪಂದಿಸಿದರು. ಜೆ.ಹೆಚ್.ಪಟೇಲ್ ಆದರ್ಶ ಸಿದ್ಧಾಂತ, ನೇರ ನುಡಿಯನ್ನ ಇವತ್ತು ಎಲ್ಲರ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.
ವಸತಿ ಸಚಿವ ವಿ.ಸೋಮಣ್ಣ, ಮಾತನಾಡಿ ಜೆ.ಹೆಚ್.ಪಟೇಲ್ ಅವರು ಮಾಡಿದ ಸೇವೆ ಮತ್ತು ಅವರ ಮಾನವೀಯತೆ, ಸಹನೆ, ತಾಳ್ಮೆ ದೊಡ್ಡತನ ಇಂದಿನ ರಾಜಕಾರಣಿಗಳು ಅರಿತುಕೊಳ್ಳಬೇಕು. ನನ್ನ ರಾಜಕೀಯ ಜೀವನಕ್ಕೆ ಜೆ.ಹೆಚ್.ಪಟೇಲ್ ರವರು ಸಹಕಾರ ನೀಡಿದರು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿರವರ ಆಶೀರ್ವಾದದ ಪುಣ್ಯಫಲದಿಂದ ಮೊದಲ ಬಾರಿಗೆ ಶಾಸಕನಾಗಿ ಗೆದ್ದು ಬಂದೆ ಎಂದರು.
ಜೆ.ಹೆಚ್.ಪಟೇಲ್ ಹೃದಯ ಶ್ರೀಮಂತಿಕೆಗೆ ಜೆ.ಹೆಚ್.ಪಟೇಲ್ ಅವರೇ ಸಾಟಿ. ಬೆಂಗಳೂರು ನಗರ ಅಭಿವೃದ್ಧಿಗೆ ಜೆ.ಹೆಚ್.ಪಟೇಲ್ ಸಾಕಷ್ಟು ಕೊಡುಗೆ ನೀಡಿದ್ದರು. ರಾಜಕಾರಣ ನಿಂತ ನೀರಲ್ಲ, ಉತ್ತಮ ರಾಜಕಾರಣಿಗಳ ಜೊತೆಯಲ್ಲಿ ಒಡನಾಟ ಮಾಡು ಎಂದು ಜೆ.ಹೆಚ್.ಪಟೇಲ್ ರು ನನಗೆ ಸಲಹೆ ನೀಡಿದ್ದರು ಎಂದರು.
ಉತ್ತಮ ಆಡಳಿತ ನಿರ್ವಹಣೆ, ಯುವ ರಾಜಕಾರಣಿಗಳಿಗೆ ಪ್ರೋತ್ಸಹ ನೀಡುತ್ತಿದ್ದರು. ಸರಳತೆ, ನೇರ ನುಡಿಯ ಜೆ.ಹೆಚ್.ಪಟೇಲ್ ರವರು ಜನ ಸಾಮಾನ್ಯರ ಮುಖ್ಯಮಂತ್ರಿಯಾಗಿದ್ದರು ಎಂದರು.
ಸಚಿವರಾದ ಗೋವಿಂದ ಕಾರಜೋಳ ಮಾತನಾಡಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ರವರು ಪ್ರಕೃತಿಯ ಆರಾಧಕರು, ಶರಣ ಸಂಸ್ಕೃತಿಯನ್ನ ಜೀವನದಲ್ಲಿ ಆಳವಡಿಕೊಂಡಿದ್ದರು. ಶ್ರೀಮಂತರಾಗಿ ಹುಟ್ಟಿದರು ಬಡಜನರ ಬಗ್ಗೆ ಅಪಾರ ಪ್ರೀತಿ ಇಟ್ಟಿದ್ದರು. ದಿ.ರಾಮಕೃಷ್ಣಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್ ರವರು ಉತ್ತರ ಕರ್ನಾಟಕ ಜನರಿಗೆ ಹೆಚ್ಚಿನ ರಾಜಕೀಯ ಅವಕಾಶ ನೀಡಿದರು ಎಂದರು.
ಸಮಾಜದ ಬಗ್ಗೆ ಕಳಕಳಿ, ದೀನದಲಿತರ ಬಗ್ಗೆ ಗೌರವ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಸಮಾಜಸೇವೆ ಎಂದರೆ ಹಣಗಳಿಸುವ ಉದ್ಯಮವಾಗಬಾರದು ಎಂದು ಜೆ.ಹೆಚ್.ಪಟೇಲ್ ರವರು ಹೇಳುತ್ತಿದ್ದರು ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾತನಾಡಿ, ಜೆ.ಹೆಚ್.ಪಟೇಲ್ ರವರ ಆಡಳಿತದಲ್ಲಿ ಸ್ನೇಹಮಯ ವಾತಾವರಣದಲ್ಲಿ ವಿಧಾನಸಭೆಯ ಕಲಾಪ ನಡೆಯುತ್ತಿತು. ಜೆ.ಹೆಚ್.ಪಟೇಲ್ ರವರು ನೇರ ನುಡಿಯ ದಿಟ್ಟ ಹೋರಾಟಗಾರಿದ್ದರು. ಅವರ ಚಿಂತನೆ, ಆದರ್ಶ ಇಂದಿಗೂ ಶಾಶ್ವತವಾಗಿದೆ ಮತ್ತು ವಿರೋಧ ಪಕ್ಷದವರ ಸ್ನೇಹ, ಪ್ರೀತಿಗೆ ಪಾತ್ರರಾಗಿದ್ದರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತಾಡಿದ ಮಾಜಿ ಸಚಿವ ಎಸ್.ಕೆ.ಕಾಂತಾ, ಜೆ.ಹೆಚ್.ಪಟೇಲ್ ರವರು ನನ್ನ ರಾಜಕೀಯ ಗುರುಗಳಾಗಿದ್ದಾರೆ. ಅವರ ನೆರಳಲ್ಲಿ ನಾವು ರಾಜಕೀಯವಾಗಿ ಬೆಳೆಯಲು ಸಾಧ್ಯವಾಯಿತು. ಸಮಾಜವಾದಿ ಚಿಂತನೆಯ ಹರಿಕಾರ, ಮಾನವೀಯತೆ ಮಹಾಮೂರ್ತಿ ಎಂದರೆ ಜೆ.ಹೆಚ್.ಪಟೇಲ್ ರವರು ಎಂದರು.
ಸಮಾಜ ಸೇವಕ ತ್ರಿಶೂಲ್ ಪಾಣಿ ಪಟೇಲ್, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ, ರಾಜ್ಯ ಬಿ.ಜೆ.ಪಿ.ಯುವ ಮುಖಂಡ ಡಾ||ಅರುಣ್ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಪಾಲನೇತ್ರ, ಮಾಜಿ ಮೇಯರ್ ಜೆ.ಹುಚ್ಚಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಟ ಸುಂದರಾಜ್, ಪಾಲಿಕೆ ಮಾಜಿ ಸದಸ್ಯರಾಸ ಡಾ||ಎಸ್.ರಾಜು, ಕೆ.ಉಮೇಶ್ ಶೆಟ್ಟಿ, ವಾಗೇಶ್ ಮತ್ತು ನವೀನ್ ಸೋಮಣ್ಯ, ದಿವ್ಯ ಅವಿನಾಶ್ ಮೊದಲಾದವರು ಹಾಜರಿದ್ದರು.




