ಸಂವಿಧಾನದ ಮಹತ್ವ ಎಲ್ಲರಿಗೂ ತಿಳಿಯಬೇಕು: ಡಾ.ಮಹೇಶ ಜೋಶಿ

2 years ago

ಬೆಂಗಳೂರು: ನಮ್ಮ ದೇಶದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಗಳೆರಡೂ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಗಳು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಭಾರತ ಆಗಸ್ಟ್ 15, 1947 ರಂದು ಸ್ವತಂತ್ರವಾದ ನಂತರ, ಆಗಸ್ಟ್ 29ರಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ ನವೆಂಬರ್ 4, 1947ರಂದು ಮಂಡಿಸಿತು. ಇದನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು ಮತ್ತು ಅನೇಕ ಪರಿಷ್ಕರಣೆಗಳು ಮತ್ತು ತಿದ್ದುಪಡಿಗಳ ನಂತರ, ಭಾರತದ ಸಂವಿಧಾನ ಜನವರಿ 26, 1950ರಂದು ಜಾರಿಗೆ ಬಂದಿತು ಎಂದರು.

ಭಾರತೀಯ ಸ್ವಾತಂತ್ರ್ಯ ಚಳುವಳಿ, ಜನವರಿ 26, 1929ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯವನ್ನು ಗುರಿಯಾಗಿಸಿಕೊಂಡಿತು. ಲಾಹೋರ್ ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು ದಿನವನ್ನು ಪೂರ್ಣ ಸ್ವರಾಜ್ ದಿನ ಎಂದು ಘೋಷಿಸಲಾಯಿತು. ಈ ಕಾರಣಕ್ಕಾಗಿಯೇ ಭಾರತದ ಸಂವಿಧಾನವನ್ನು ಸ್ವಾತಂತ್ರ್ಯದ ನಂತರ ಈ ದಿನದಂದು ಜಾರಿಗೆ ತರಲಾಯಿತು ಎಂದರು.

ಭಾರತದ ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವುದು ಈ ದಿನದ ಗುರಿಯಾಗಬೇಕು. ಒಂದು ಸಮೀಕ್ಷೆಯಂತೆ ಈಗ ದೇಶದಲ್ಲಿರುವ ಶೇ 2ರಷ್ಟು ಜನ ಮಾತ್ರ ಗಣರಾಜ್ಯೋತ್ಸವಕ್ಕಿಂತ ಮುಂಚೆ ಹುಟ್ಟಿದವರು. ಬಹುತೇಕರಿಗೆ ಸಂವಿಧಾನದ ಪ್ರಮುಖ ಲಕ್ಷಣಗಳು ಮತ್ತು ಅದರ ಮಹತ್ವ ಗೊತ್ತಿಲ್ಲ. ಸರ್ವೋಚ್ಚ ನ್ಯಾಯಾಲಯ ಚಾರಿತ್ರಿಕ ಕೇಶವಾನಂದ ಭಾರತಿ ತೀರ್ಪಿನಲ್ಲಿ ದೇಶದ ಆಡಳಿತ ಸಂವಿಧಾನಕ್ಕೆ ತಕ್ಕಂತೆಯೇ ಇರಬೇಕು ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಮತ್ತು ಪರಿಷತ್ತಿನ ಸಿಬ್ಬಂದಿ ಭಾಗವಹಿಸಿದ್ದರು.

Leave a Reply