ಅಲೆಮಾರಿ, ಅರೆ ಅಲೆಮಾರಿಗಳಿಗೂ ಭೂಮಿ ಮತ್ತು ವಸತಿ ಸಿಗಬೇಕು: ಡಾ.ಸಿ.ಎಸ್.ದ್ವಾರಕನಾಥ್

3 years ago

#Even #nomads #seminomads #get #land #housing #CSDwarkanath

ಚಿತ್ರದುರ್ಗ: ಕರ್ನಾಟಕ ರಾಜ್ಯಾದ್ಯಂತ ಅಲೆಮಾರಿ ಸಮುದಾಯ ಇನ್ನು ಕೂಡ ಟೆಂಟ್ ಗಳಲ್ಲಿ  ವಾಸವಾಗಿದ್ದು, ಟೆಂಟ್ ಮುಕ್ತ ಕರ್ನಾಟಕವಾಗಬೇಕಾದ ಅಗತ್ಯವಿದೆ ಎಂದು ಹಿಂದುಳಿದ  ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ ಹೇಳಿದರು.

ಭಾರತ್ ಸೇವಾದಳ ಸಭಾಂಗಣದಲ್ಲಿ  ಅಲೆಮಾರಿ  ಸಮುದಾಯ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ, ಬುಡಕಟ್ಟು ಮಹಾ ಸಭಾ, ವಿಮುಕ್ತಿ ವಿದ್ಯಾ ಸಂಸ್ಥೆ ಹಾಗೂ ಕರ್ನಾಟಕ  ಶಾಂತಿ & ಸೌಹಾರ್ದ  ವೇದಿಕೆವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಅಲೆಮಾರಿಗಳ ಸಮಸ್ಯೆ  ಮತ್ತು  ಸವಾಲು” ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಅವರು, ನಿರಂತರವಾಗಿ ನಿರ್ಲಕ್ಷ್ಯಕ್ಕೊಳಪಟ್ಟಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳಿಗೆ ಸರ್ಕಾರದಿಂದ ಭೂಮಿ, ವಸತಿ ಮತ್ತು  ನಾಗರಿಕ ಸೌಲಭ್ಯಗಳು ಸಿಕ್ಕಾಗ ಶೋಷಣೆಗೆ ಒಳಗಾಗಿರುವ ಜನಾಂಗದವರು ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.

ಅಲೆಮಾರಿ ಸಮುದಾಯದ ನೆರವಿಗೆ ಸರ್ಕಾರ  ಬರಬೇಕು, ಅಲೆಮಾರಿ  ಜನಾಂಗದವರ ಮಕ್ಕಳ  ಶಿಕ್ಷಣಕ್ಕೆ  ಆದ್ಯತೆ ನೀಡಬೇಕು, ಸಂದರ್ಶನವಿಲ್ಲದೆ, ವಸತಿಯುತ ಶಾಲೆಗಳಲ್ಲಿ  ಮಕ್ಕಳಿಗೆ  ಅವಕಾಶ ಕಲ್ಪಿಸುವುದು ಸೇರಿದಂತೆ ಸರ್ಕಾರ ಹೆಚ್ಚು ಆದ್ಯತೆ ನೀಡಿದರೆ ಅಲೆಮಾರಿಗಳು ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

ಸಾಮಾಜಿಕ  ಕಾರ್ಯಕರ್ತ ಬಾಬು ಎಸ್. ಮಾತನಾಡಿ, ಅಲೆಮಾರಿ  ಸಮುದಾಯದಲ್ಲಿ ನಿರ್ಲಕ್ಷ್ಯಕ್ಕೊಳಗಾದವರು ಮತ್ತು ಅಲೆಮಾರಿ ಜನಾಂಗದ ವಿಶೇಷ ಚೇತನ ಮಕ್ಕಳು  ಹಾಗೂ ವಿಶೇಷ ಚೇತನರಿಗೆ ಅದ್ಯತೆ ನೀಡಬೇಕಾಗುತ್ತದೆ  ಎಂದು ಹೇಳಿದರು.

ಧಮ್ಮ ಕೇಂದ್ರ, ವಿಮುಕ್ತಿ  ವಿದ್ಯಾ ಸಂಸ್ಥೆಯ ನಿರ್ದೇಶಕರಾದ  ಆರ್.ವಿಶ್ವ ಸಾಗರ್ ಮಾತನಾಡಿ, ಅಲೆಮಾರಿ  ಮತ್ತು  ಅರೆ ಅಲೆಮಾರಿ ಸಮುದಾಯದ ಜನರ ಪರವಾಗಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ  ಹೋರಾಟ ನಡೆಸಿ ಅಲೆಮಾರಿ ಸುಡುಗಾಡ ಸಿದ್ದ ಜನಾಂಗದವರಿಗೆ  ಪ್ರತ್ಯೇಕ  ಕಾಲೋನಿ ನಿರ್ಮಾಣ  ಮಾಡಲಾಗಿದ್ದು, ಒಂದಿಷ್ಟು  ಕೆಲಸಗಳಾಗಬೇಕಿದೆ. ಅಲೆಮಾರಿಗಳ ಪರವಾಗಿ ವಿಮುಕ್ತಿ  ವಿದ್ಯಾ ಸಂಸ್ಥೆ  ಟೀಮ್  ಸಂಪೂರ್ಣವಾಗಿ ಶ್ರಮಿಸಿದೆ ಎಂದರು.

ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ  ಮಾತನಾಡಿ, ಅಲೆಮಾರಿಗಳು ತಮ್ಮ ಮೂಲಭೂತ ಹಕ್ಕುಗಳಿಗೆ ಹೋರಾಟದಿಂದ ಪಡೆದುಕೊಳ್ಳಲು ಮುಂದಾಗಬೇಕೆಂದು ಹೇಳಿದರು.

ಯಾದವ ಸಮುದಾಯದ ಸ್ವಾಮೀಜಿ ಮಾತನಾಡಿ, ತಮ್ಮ ಅಶ್ರಮದಲ್ಲಿ ನೂರಾರು ಅಲೆಮಾರಿ ಮಕ್ಕಳಿಗೆ  ಶಿಕ್ಷಣ, ಊಟ ಕಲ್ಪಿಸಲಾಗಿದ್ದು, ಇನ್ನುಬೇಕೆಂದರು ಹೆಚ್ಚಿನ ಮಕ್ಕಳಿಗೆ  ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

ಅಲೆಮಾರಿ ಸಮುದಾಯದವರ ಸಮಸ್ಯೆ &  ಸವಾಲು ಕುರಿತು ಸಂವಾದ ಗೋಷ್ಠಿಯಲ್ಲಿ ಅಲೆಮಾರಿ  ಮತ್ತು  ಬುಡಕಟ್ಟು ಮಹಾ ಸಭಾದ ಅಧ್ಯಕ್ಷ  ಹನುಮಂತಪ್ಪ , ಕಾರ್ಯದರ್ಶಿ ನಾಗರಾಜ್, ದಾವಣಗೆರೆ ಮುಖಂಡರಾದ ತಿಪ್ಪೇಶಪ್ಪ, ತಿಪ್ಪಣ್ಣ, ಅಲೆಮಾರಿ ಸಮುದಾಯದ ಮುಖಂಡರಾದ ಕೆ.ಎಂ.ನಾಗರಾಜ್, ಬಾಬು, ಕಮಲಹಾಸನ್, ಧನಂಜಯ, ಸಿಳ್ಳೆಕ್ಯಾತರ ಸಂಘಟನೆಯ ಕೃಷ್ಣಪ್ಪ, ಬುಡ್ಗ ಜಂಗಮ ಜನಾಂಗದ  ಮುಖಂಡರಾದ ಗುರುಮೂರ್ತಿ, ಸಣ್ಣಹುಸೇನಿ, ವಕೀಲರು ಮತ್ತು  ಅಲೆಮಾರಿ ಸಂಘಟನೆ ಮುಖಂಡ ಪ್ರತಾಪ್‌ ಜೋಗಿ, ಕೊರಚ ಸಮುದಾಯದ  ಜಿಲ್ಲಾ ಅಧ್ಯಕ್ಷ ವೃೆ.ಕುಮಾರ್, ಅಲೆಮಾರಿ ಸಂಘಟನೆಯ ಮಹಿಳಾಮುಖಂಡರು, ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್, ಹನೀಪ್ ಕೋಟೆ, ಧಮ್ಮ ಸಾಂಸ್ಕೃತಿಕ  ಕೇಂದ್ರ  ಅರಣ್ಯ ಸಾಗರ್  ಮುಂತಾದವರು ಹಾಜರಿದ್ದರು.

Leave a Reply