ಬೆಂಗಳೂರು: ಬೆಂಗಳೂರು ನಗರದಲ್ಲೇ ಪ್ರಪ್ರಥಮ ಬಾರಿಗೆ 120 ದಶಲಕ್ಷ ಲೀ. ಶುದ್ಧೀಕರಿಸಿದ ಬೆಂಗಳೂರು ಜಲಮಂಡಳಿಯ ತ್ಯಾಜ್ಯ ನೀರನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಂಡಹಳ್ಳಿ ಕೆರೆಗೆ ತುಂಬಿಸುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕ, ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಪರಿಸರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪರಿಸರ ಉಳಿದರೆ ನಾಡು ಉಳಿಯುತ್ತದೆ, ಪರಿಸರ ಸ್ವಚ್ಚತೆ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬಾಳಿ ಬದುಕಬಹುದು. ನಮ್ಮ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಉದ್ಯಾನವನಗಳನ್ನು ನವೀಕರಣ ಮಾಡಿ ಹಸಿರುನಿಂದ ಕಂಗೊಳಿಸುವಂತೆ ಪರಿಸರ ರಕ್ಷಣೆ ಮಾಡಲಾಗಿದೆ ಎಂದರು.
ನಾಡಪ್ರಭು ಕೆಂಪೇಗೌಡರ ಆಡಳಿತದ ಅವಧಿಯಲ್ಲಿ ನಗರದಲ್ಲಿ 250ಕ್ಕೂ ಹೆಚ್ಚು ಕೆರೆಗಳು ಇದ್ದವು. ಆದರೆ ಇಂದು ಕೆರೆಗಳು ಅಭಿವೃದ್ದಿ ಹೆಸರಿನಲ್ಲಿ ಮತ್ತು ಭೂಕಬಳಿಕೆದಾರರ ಪಾಲಾಗಿವೆ. ಬಾಳಯ್ಯನ ಕೆರೆ ಭೂಕಬಳಿಕೆದಾರರ ವಶದಲ್ಲಿ ಇತ್ತು. ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದ ಫಲದಿಂದ ಭೂಕಬಳಿಕೆದಾರರ ವಿರುದ್ದ ಹೋರಾಟ ಮಾಡಿ ಬಾಳಯ್ಯನ ಕೆರೆ ಉಳಿಸಲಾಯಿತು ಎಂದರು.
ನಾಯಂಡಹಳ್ಳಿ ಕೆರೆ 18 ಎಕರೆ ಜಾಗದಲ್ಲಿ 3 ಎಕರೆ ಒತ್ತುವರಿಯಾಗಿ 15 ಎಕರೆ 4ಗಂಟೆ ಜಾಗ ಉಳಿದಿದೆ. ಕೊಳಚೆ ನೀರು ನಾಯಂಡಹಳ್ಳಿ ಕೆರೆಗೆ ಹರಿದು ಬರುತ್ತಿತ್ತು. ಕೆರೆ ಸಂರಕ್ಷಣೆ ಮಾಡಬೇಕು ಎಂಬ ಕಾರಣದಿಂದ ವಿಶೇಷ ಯೋಜನೆ ರೂಪಿಸಿ, 120 ದಶಲಕ್ಷ ಲೀ ಶುದ್ದಿಕರಿಸಿದ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ನಾಯಂಡಹಳ್ಳಿ ಕೆರೆ ಸುತ್ತ ಪಾದಚಾರಿಗಳಿಗೆ ವಾಕಿಂಗ್ ಟ್ರಾಕ್ ಮತ್ತು ಮುಂದಿನ ದಿನದಲ್ಲಿ ಸಾರ್ವಜನಿಕರಿಗೆ ಕೆರೆ ವೀಕ್ಷಣೆ ಮಾಡಲು ದೋಣಿ ವ್ಯವಸ್ಥೆ ಮತ್ತು ನೂರಾರು ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸಿ ಸಾರ್ವಜನಿಕರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ಕೆರೆಗಳ ಸಂರಕ್ಷಣೆಯಿಂದ ಭೂಮಿಯ ಕೆಳಭಾಗದಲ್ಲಿ ತೇವಾಂಶದಿಂದ ಸುತ್ತಮುತ್ತಲ ಪ್ರದೇಶದ ಗಿಡ, ಮರಗಳು ಸಮ್ಮದ್ದಿಯಾಗಿ ಬೆಳೆಯುತ್ತವೆ ಮತ್ತು ಬೋರ್ ವೆಲ್ ಗಳು ಬತ್ತಿಹೋಗುವುದಿಲ್ಲ. ನಮ್ಮ ಕ್ಷೇತ್ರದ ಜನರ ಪ್ರೋತ್ಸಾಹ, ಸಹಕಾರದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಮಾದರಿ ಕ್ಷೇತ್ರ ಮಾಡಲು ಸಾಧ್ಯವಾಗಿದೆ ಎಂದರು.
ಗೋವಿಂದರಾಜನಗರದ ವಿಶ್ವನಾಥಗೌಡ, ಜಲಮಂಡಳಿ ಅಧ್ಯಕ್ಷ ಜಯರಾಮ್, ಸ್ಲಂ ಬೋರ್ಡ್ ನಿರ್ದೇಶಕ ಕ್ರಾಂತಿರಾಜು, ಮುಖ್ಯ ಇಂಜಿನಿಯರ್ ದೊಡ್ಡಯ್ಯ, ಜಲಮಂಡಳಿ ಮುಖ್ಯ ಇಂಜಿನಿಯರ್ ದೇವರಾಜ್,ಕಾರ್ಯಪಾಲಕ ಇಂಜಿನಿಯರ್ ಪ್ರಕಾಶ್, ವಾರ್ಡ್ ಅಧ್ಯಕ್ಷ ಹರೀಶ್, ಮಂಡ್ಯ ವೆಂಕಟೇಶ್, ವಜ್ರಪ್ಪ, ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.




