ಯಾದಗಿರಿ: ಕೆಂಭಾವಿ ಪಟ್ಟಣದ ಪ್ರಮುಖ ರಸ್ತೆ, ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರು ಕತ್ತಲೆಯಲ್ಲಿ ಓಡಾಡುವಂತಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮರೆಪ್ಪ ಕಟ್ಟಿಮನಿ ಆರೋಪಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದಿರುವ ಅವರು, ಪಟ್ಟಣದಲ್ಲಿ ಸುರಪುರ – ಹುನಗುಂದ ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದ ಈ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಪಟ್ಟಣದ ಸೌಂದರ್ಯಿಕರಣಕ್ಕೆ ಒತ್ತು ನೀಡಲಾಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಅದು ಹುಸಿಯಾಗಿದೆ ಎಂದು ದೂರಿದ್ದಾರೆ.
ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಾದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಪ್ರಮುಖ ರಸ್ತೆ, ಬಡಾವಣೆಗಳಲ್ಲಿ ವಿದ್ಯುತ್ ಕಂಬಗಳಿದ್ದರೂ ಬೆಳಕಿನ ವ್ಯವಸ್ಥೆ ಸರಿಯಾಗಿಲ್ಲ. ಹೆಸರಿಗೆ ಮಾತ್ರ ಕಂಬಗಳಿವೆ. ಇದನ್ನು ಕಂಡರೂ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ ಎಂದಿದ್ದಾರೆ.
ಒಂದು ವಾರದಲ್ಲಿ ಎಲ್ಲ ಕಂಬಗಳಿಗೆ ದೀಪ ಅಳವಡಿಸಬೇಕು ಇಲ್ಲದಿದ್ದಲ್ಲಿ ಪಟ್ಟಣದ ನಾಗರಿಕರೊಂದಿಗೆ ಸೇರಿ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.




