ಈ ಸಲದ ಮೂರು ಚುನಾವಣೆಗಳಲ್ಲಿ ಭಾಗವಹಿಸಿದ ಮೂರು ಪಕ್ಷಗಳು ಒಂದೊಂದು ಕಡೆ ಗೆದ್ದಿರುವುದು ಹೌದಾದರೂ ಅವುಗಳ ಮುಖದಲ್ಲಿ ಪ್ರೇತ ಕಳೆ ನಿಚ್ಚಳವಾಗಿ ಗೋಚರಿಸುತ್ತಿದೆ.
ಆರು ಮುಖ್ಯಮಂತ್ರಿಗಳನ್ನು, ಅನೇಕ ಕೇಂದ್ರ ಮಂತ್ರಿಗಳನ್ನು ಮತ್ತು ಲೋಕಸಭಾ ಸದಸ್ಯರನ್ನು ದೆಹಲಿಯ ಎಂಸಿಡಿಯ ಚುನಾವಣೆಗೆ ಕರೆಸಿದ್ದ ಬಿಜೆಪಿಗೆ ಎಂಸಿಡಿ ಗೆಲ್ಲಲಾಗಲಿಲ್ಲ. ಜೈಲಿನಲ್ಲಿರುವ ವಂಚಕ ಚಂದ್ರಶೇಖರನ ಒಂದು ಹೇಳಿಕೆಯನ್ನೂ ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಬಿಜೆಪಿ ಅಧ್ಯಕ್ಷರ ಊರಾದ ಹಿಮಾಚಲ ಪ್ರದೇಶದಲ್ಲಿ ಅದಕ್ಕೆ ಅಧಿಕಾರವನ್ನು ಉಳಿಸಿಕೊಳ್ಳಲಾಗಲಿಲ್ಲ. ಇದು ಅವರ ಗುಜರಾತ್ ವಿಜಯವನ್ನು ಕಳೆಗುಂದಿಸಿತು. ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ʼಸಂಭ್ರಮೋತ್ಸವʼದಲ್ಲಿ ಎಲ್ಲರೂ ಅಳುತ್ತಿರುವಂತೆ ಮಾತಾಡಿದರು.
ಗುಜರಾತಿನಲ್ಲಿ ಗೆದ್ದೇ ಗೆಲ್ತೇವೆ ಎಂದು ಬರೆದುಕೊಟ್ಟಿದ್ದ ಕೇಜರೀವಾಲ್ ಅಲ್ಲಿ ಅನುಭವಿಸಿದ್ದು ಹೀನಾಯ ಸೋಲು. ಹೀಗಾಗಿ ಆಪ್ ಗೆ ದೆಹಲಿಯ ಎಂಸಿಡಿ ಗೆಲುವನ್ನು ಸಂಭ್ರಮಿಸಲಾಗಲೇ ಇಲ್ಲ. ʼಮೇಯರ್ ನಮ್ಮದೇʼ ಎಂದ ಬಿಜೆಪಿಯ ಘೋಷಣೆ ಅದರ ಇದ್ದ ಬದ್ದ ಸಂತೋಷವನ್ನೂ ಕಸಿದುಕೊಂಡಿತು.
ಗುಜರಾತ್ ಮತ್ತು ದೆಹಲಿಯಲ್ಲಿ ಮೂರನೇ ಸ್ಥಾನಕ್ಕೆ ಹೀನಾಯವಾಗಿ ತಳ್ಳಲ್ಪಟ್ಟ ಕಾಂಗ್ರೆಸ್ ಗೆ ಹಿಮಾಚಲ ಪ್ರದೇಶ ದಕ್ಕಿದರೂ ಅದೀಗ ಅದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ಸಿಗೆ ಅದರ ಗೆಲುವಿನಿಂದ ಹಚ್ಚಾಗಿ ಸೋಲುಗಳೇ ಕಾಡುತ್ತಿವೆ.
ಹೀಗಾಗಿ ಈ ಸಲದ ಚುನಾವಣೆಗಳು ದೇಶದಾದ್ಯಂತ ಒಂದು ಬಗೆಯ ಪ್ರೇತಕಳೆಯನ್ನು ಹುಟ್ಟು ಹಾಕಿದೆ.
ಅಂದ ಹಾಗೆ ಡಿಸೆಂಬರ್ ೧೧ರಂದು ತಮಿಳಿನ ಸುಪ್ರಸಿದ್ಧ ಕವಿ ಸುಬ್ರಹ್ಮಣ್ಯ ಭಾರತಿಯವರ ಹುಟ್ಟು ಹಬ್ಬವನ್ನು ʼ ಭಾರತೀಯ ಭಾಷಾ ದಿವಸʼವಾಗಿ ಆಚರಿಸಲು ಯುಜಿಸಿ ನಿರ್ಧರಿಸಿ ಈಗಾಗಲೇ ಸುತ್ತೋಲೆ ಕಳಿಸಿದೆ. ಅಂಥ ಒಂದು ಕಾರ್ಯಕ್ರಮದಲ್ಲಿ ನಾನೂ ʼಕನ್ನಡ ಅಭಿಜಾತ ಸಾಹಿತ್ಯʼದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದೇನೆ. ವಿಷಯ ಅದಲ್ಲ.
ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಮೊದಲಬಾರಿಗೆ ಅಧಿಕಾರಕ್ಕೆ ತಂದ ಕರ್ನಾಟಕ ಸರಕಾರವು ಹೀಗೆ ಕನ್ನಡದ ಯಾರಾದರೂ ಕವಿಯನ್ನು ರಾಷ್ಟ್ರ ಮಟ್ಟಕ್ಕೆ ಏರಿಸುವ ಕೆಲಸ ಮಾಡಿದ್ದುಂಟಾ?
ಕಲ್ಲಂಗಡಿ ಹಣ್ಣು, ಹಿಜಾಬ್, ಸಲಾಂಗಳಲ್ಲಿ ಮುಳುಗಿ ಹೋಗಿರುವ ಅದಕ್ಕೆ ಅಂಥ ಒಂದು ಮುನ್ನೋಟವಾದರೂ ಇದೆಯಾ?
-ಪುರುಷೋತ್ತಮ ಬಿಳಿಮಲೆ, ಹಿರಿಯ ವಿಮರ್ಶಕರು




