ಬೆಂಗಳೂರು: ಪ್ರತಿ ದಿನ ಒಂದು ಪೊಲೀಸ್ ಠಾಣೆಗೆ ಭೇಟಿ ನೀಡಬೇಕು ಹಾಗೂ ವಾರದಲ್ಲಿ ಒಂದು ದಿನ ರಾತ್ರಿ ಗಸ್ತು ನಡೆಸಿ ಸಿಬ್ಬಂದಿ ಕಾರ್ಯನಿರ್ವಹಣೆ ಪರಿಶೀಲಿಸಿ ಅಪರಾಧ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಂತೆ ನಗರದ ಉಪ ಪೊಲೀಸ್ ಆಯುಕ್ತರು (ಡಿಸಿಪಿ) ಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಖಡಕ್ ಸೂಚನೆ ನೀಡಿದ್ದಾರೆ.
ಕಳೆದ ಬಾರಿ ನಡೆಸಿದ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಇಂದು ಕರೆದಿದ್ದ ಮತ್ತೊಂದು ಸಭೆಯಲ್ಲಿ ಪರಾಮರ್ಶೆ ನಡೆಸಿ ಮಾಹಿತಿ ಪಡೆದ ಅಲೋಕ್ ಮೋಹನ್ ಅವರು ಪೊಲೀಸ್ ಠಾಣೆಗಳ ಭೇಟಿ ಹಾಗೂ ರಾತ್ರಿ ಗಸ್ತಿನ ಬಗ್ಗೆ ತಮ್ಮ ಕಚೇರಿಗೆ ವರದಿ ಸಲ್ಲಿಸುವಂತೆ ಹೇಳಿದ್ದಾರೆ. ಬಂದೋಬಸ್ತ್ ಸೇರಿದಂತೆ ಕೆಲವು ತುರ್ತು ಸಂದರ್ಭಗಳ ಹೊರತುಪಡಿಸಿ ಪ್ರತಿ ದಿನ ಒಂದು ಠಾಣೆಗೆ ಭೇಟಿ ನೀಡಿ ಆ ಠಾಣೆಯ ಕಾರ್ಯನಿರ್ವಹಣೆ ಬಗ್ಗೆ ನಗರ ವ್ಯಾಪ್ತಿ ಡಿಸಿಪಿಗಳು ಪರಿಶೀಲಿಸಬೇಕು ಎಂದು ಸೂಚಿಸಿದರು.
ಭೇಟಿಯ ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್ ಮಾತ್ರವಲ್ಲದೆ ನಾಗರಿಕರ ಜತೆ ಸಂವಾದ ನಡೆಸಿ ಆಹವಾಲು ಆಲಿಸಬೇಕು. ಅಲ್ಲದೇ ಠಾಣಾ ವ್ಯಾಪ್ತಿಯ ಅಪರಾಧ ಕೃತ್ಯಗಳ ಪತ್ತೆ, ಡ್ರಗ್ಸ್ ವಿರುದ್ಧದ ಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ಮೇಲೆ ವಹಿಸಿರುವ ಎಚ್ಚರಿಕೆ ಕ್ರಮಗಳ ಪರಾಮರ್ಶೆ ನಡೆಸಬೇಕು ಎಂದು ತಿಳಿಸಿದರು.
ಅನಿರೀಕ್ಷಿತವಾಗಿ ರಾತ್ರಿ ಸಂಚಾರ ಕೈಗೊಂಡು ರಾತ್ರಿ ಗಸ್ತು ಸಿಬ್ಬಂದಿ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲಿಸಬೇಕು. ಆ ವೇಳೆ ಇ-ಬೀಟ್ ಆ್ಯಪ್‌ನಲ್ಲಿ ಗಸ್ತು ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಆಪ್‌ಡೇಟ್ ದಾಖಲಿಸುವಂತೆ ಅಧಿಕಾರಿಗಳಿಗೆ ಡಿಜಿಪಿ ಆದೇಶಿಸಿದ್ದಾರೆ.
ರಾಜಿ ಮನೋಭಾವಗಳನ್ನು ಬಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಬೇಕು, ನಗರದಲ್ಲಿ ಸೈಬರ್ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ನುರಿತ ಹಾಗೂ ತರಬೇತಿ ಪಡೆದ ಸಿಬ್ಬಂದಿ ಸೆನ್ ಪೊಲೀಸ್ ಠಾಣೆಗಳಿಗೆ ನಿಯೋಜಿಸಿ ದೂರುಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಕೆಲ ಮತೀಯ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನಗಳನ್ನು ನಡೆಸುತ್ತಿದ್ದು ಅಂತಹ ಶಕ್ತಿಗಳ ವಿರುದ್ಧ ಹೆಚ್ಚಿನ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.
ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ ಗುಪ್ತಚರದಳದಿಂದ ಬರುವ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಪರಾಧ ಕೃತ್ಯಗಳು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ಆರೋಪಿಗಳು ತಂತ್ರಜ್ಞಾನ ಬಳಕೆ ಹೆಚ್ಚು ಮಾಡುತ್ತಿದ್ದು ಅದಕ್ಕೆ ತಕ್ಕಂತೆ ಪೊಲೀಸರಿಗೆ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ, ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್, ಜಂಟಿ ಆಯುಕ್ತ ಅನುಚೇತ್, ಶರಣಪ್ಪ ಎಲ್ಲಾ ವಿಭಾಗದ ಡಿಜಿಪಿಗಳು ಸಭೆಯಲ್ಲಿ ಭಾಗವಹಿಸಿದ್ದರು.




