ಪ್ರತಿಮೆಯ ಕಾರಣಕ್ಕೆ ಕ್ಷಮೆ ಕೇಳುವ ಪ್ರಧಾನಿಗಳು ಕ್ಷಮೆ ಕೇಳಲು ಮರೆತ ಹತ್ತಾರು ಕಾರಣಗಳು

2 years ago

ಮಹಾರಾಷ್ಟ್ರದಲ್ಲಿ ಸದ್ಯದಲ್ಲಿಯೇ ಚುನಾವಣೆ ನಡೆಯುವ ಕಾರಣದಿಂದ ಹಲವಾರು ಕೋಟಿ ರೂಪಾಯಿಗಳು ಖರ್ಚು ಮಾಡಿ ಸ್ಥಾಪಿಸಿದ್ದ ಶಿವಾಜಿ ಮಹಾರಾಜರ ಪ್ರತಿಮೆ ಉರುಳಿ ಬಿದ್ದ ಕಾರಣಕ್ಕೆ ಕೈಮುಗಿದು ಕ್ಷಮೆ ಕೇಳಿದ ಪ್ರಧಾನಮಂತ್ರಿಗಳು ಇಂತಹ ಕ್ಷಮೆಯನ್ನು ಅನೇಕ ಕಾರಣಗಳಿಗಾಗಿ ಕೇಳಬೇಕಾಗಿದೆ.

500 ಮತ್ತು ಒಂದು ಸಾವಿರ ರೂಪಾಯಿಗಳ ನೋಟನ್ನ ಅಮಾನ್ಯೀಕರಣಗೊಳಿಸಿದ ಸಂದರ್ಭದಲ್ಲಿ 50 ದಿನದ ಒಳಗಾಗಿ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ರಾಷ್ಟ್ರದ ಜನತೆಗೆ ಭರವಸೆ ಕೊಟ್ಟಿದ್ದರು. ಆದರೆ ಹಲವಾರು ವರ್ಷಗಳಾದರೂ ನೋಟು ಅಮಾನ್ಯೀಕರಣದ ಕೆಟ್ಟ ಪರಿಣಾಮಗಳು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಬಿದ್ದ ಕಾರಣದಿಂದ ಸಾಮಾನ್ಯ ಜನರು, ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ತಮ್ಮ ಬಳಿ ಇದ್ದ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳುವ ಸಲುವಾಗಿ ಬ್ಯಾಂಕುಗಳ ಮುಂದೆ ಸಾಲು ನಿಂತ ಸಂದರ್ಭದಲ್ಲಿ ನೂರಾರು ಮಂದಿ ತಮ್ಮ ಪ್ರಾಣವನ್ನ ಕಳೆದುಕೊಂಡರು, ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ರಾಷ್ಟ್ರದ ಜನತೆಯನ್ನ ಕ್ಷಮೆ ಕೇಳಲೇ ಇಲ್ಲ.

ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಅವೈಜ್ಞಾನಿಕವಾದ ನಡವಳಿಕೆಯಿಂದ ಹಾಗೂ ಸಕಾಲದಲ್ಲಿ ಔಷಧಿ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ ಜೊತೆಗೆ ಆಕ್ಸಿಜನ್ ಸೌಲಭ್ಯಗಳನ್ನ ದೊರಕಿಸಿಕೊಡಲಾಗದೆ ಲಕ್ಷಾಂತರ ಮಂದಿ ಪ್ರಾಣವನ್ನು ಕಳೆದುಕೊಂಡರು. ಇಂತಹ ವೈಫಲ್ಯಕ್ಕಾಗಿ  ಕ್ಷಮೆಯನ್ನು ಕೇಳಲೇ ಇಲ್ಲ.

ಗುಜರಾತಿನಲ್ಲಿ ಸೇತುವೆ  ಮುರಿದು ಬಿದ್ದು ನೂರಾರು ಮಂದಿ ಪ್ರಾಣವನ್ನು ಕಳೆದುಕೊಂಡರು. ಆ ಸಂದರ್ಭದಲ್ಲಿ ಸಹ ಪ್ರಧಾನಮಂತ್ರಿಗಳು ಕನಿಷ್ಠ ಗುಜರಾತಿನ ಜನರ ಕ್ಷಮೆಯನ್ನು ಕೇಳಲಿಲ್ಲ.

ಕೆಟ್ಟ ಆರ್ಥಿಕ ನೀತಿಗಳಿಂದ ದೇಶದಲ್ಲಿ ಸಾವಿರಾರು ಉದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಮುಚ್ಚಿ ನಷ್ಟವನ್ನು ಅನುಭವಿಸಿದರು. ನೂರಾರು ಮಂದಿ ಸಾಲದ ಸುಳಿಗೆ ಸಿಲುಕಿ ಅಸಹಾಯಕರಾಗಿ ಆತ್ಮಹತ್ಯೆ ಹಾದಿಯನ್ನು ಹಿಡಿದರು. ಈಗಲೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕೂ ಕ್ಷಮೆಯನ್ನು ಕೇಳಲಿಲ್ಲ.

ದೆಹಲಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ಧರಣಿಯನ್ನ ನಡೆಸಿದ ಲಕ್ಷಾಂತರ ರೈತರ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲದೆ ನಡೆದುಕೊಂಡ ಕಾರಣದಿಂದಾಗಿ ಕೇಂದ್ರ ಸರ್ಕಾರದ ದುರ್ವರ್ತನೆಯಿಂದಾಗಿ 700ಕ್ಕೂ ಹೆಚ್ಚು ರೈತರು ಪ್ರಾಣವನ್ನ ಕಳೆದುಕೊಂಡರು. ರೈತರ ಪ್ರಾಣವನ್ನು ಕಳೆದುಕೊಂಡ ಕಾರಣಕ್ಕಾದರೂ ರೈತರ ಕ್ಷಮೆಯನ್ನು ಕೇಳಲಿಲ್ಲ.

ಚುನಾವಣೆಯ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಹಾಕುವುದಾಗಿ ಭರವಸೆಯನ್ನ ಕೊಟ್ಟು ಮತವನ್ನ ಪಡೆದುಕೊಂಡಿದ್ದೀರಿ. ಆದರೆ 15 ಪೈಸೆಯನ್ನು ಸಹ ಯಾರ ಖಾತೆಯೂ ಹಾಕಲಿಲ್ಲ. ಈ ರೀತಿಯ ಸುಳ್ಳು ಭರವಸೆ ನೀಡಿದ ಕಾರಣಕ್ಕಾಗಿ ರಾಷ್ಟ್ರದ ಜನತೆಯ ಕ್ಷಮೆಯನ್ನು ಕೇಳುವ ಮನಸ್ಸು ಬರಲೇ ಇಲ್ಲ.

ಬೆಲೆಗಳನ್ನು ನಿಯಂತ್ರಿಸಿ ಜನಸಾಮಾನ್ಯರ ಬದುಕನ್ನು ಸುಂದರಗೊಳಿಸುವುದಾಗಿ ಎಲ್ಲರ ವಿಕಾಸವನ್ನು ಮಾಡುವುದಾಗಿ ಪದೇ ಪದೇ ಹೇಳುತ್ತಿರುವ ಪ್ರಧಾನಮಂತ್ರಿಗಳು ದಿನದಿಂದ ದಿನಕ್ಕೆ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಎಲ್ಲರ ವಿಕಾಸ ಆಗುತ್ತಿಲ್ಲ, ಎಲ್ಲರ ವಿಶ್ವಾಸವನ್ನು ಪ್ರಧಾನಮಂತ್ರಿಗಳು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಕ್ಷಮೆಯನ್ನು ಕೇಳಲೇ ಇಲ್ಲ.

ಭ್ರಷ್ಟಾಚಾರವನ್ನು ನಿಯಂತ್ರಿಸುತ್ತೇನೆ ಎಂದು ಹೇಳಿ ಕೆಲವು ಬಾರಿ ಎಂದು ಭ್ರಷ್ಟಾಚಾರಿಗಳನ್ನ ಬಿಡುವುದಿಲ್ಲ ಎಂದು ಅಬ್ಬರಿಸಿದ ಪ್ರಧಾನಮಂತ್ರಿಗಳು ತಮ್ಮಲ್ಲಿರುವ ವಾಷಿಂಗ್ ಮಿಷನ್ ಬಳಸಿ ಅನ್ಯ ಪಕ್ಷದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿದ್ದ ಕಡುಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ತಮ್ಮ ವಾಷಿಂಗ್ ಮೆಷಿನ್ ನಲ್ಲಿ ಮುಳುಗಿಸಿದ ಕಾರಣಕ್ಕಾಗಿ ಅವರುಗಳು ಸತ್ಯವಂತರಾದರು. ಇಂತಹ ಇಬ್ಬಗೆಯ ನೀತಿಗೆ ಪ್ರಧಾನಮಂತ್ರಿಗಳು ಕ್ಷಮೆಯನ್ನು ಕೇಳಬೇಕಾಗಿತ್ತು.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಪರೇಷನ್ ಕಮಲ ಎನ್ನುವಂತಹ ಕೆಟ್ಟ ಸಂಸ್ಕೃತಿಯನ್ನು ಹುಟ್ಟು ಹಾಕಿ, ಈ ಮೂಲಕ ಅನ್ಯ ಪಕ್ಷದ ಸರ್ಕಾರಗಳನ್ನ ಅಲ್ಪಮತಕ್ಕೆ ಇಳಿಸಿ ಶಾಸಕರನ್ನು ಖರೀದಿಸಿ ಪಕ್ಷಾಂತರಕ್ಕೆ ಪ್ರೋತ್ಸಾಹಿಸುವಂತಹ ಪ್ರಜಾಪ್ರಭುತ್ವದ ವಿರೋಧಿ ಧೋರಣೆಯನ್ನ ಅನುಸರಿಸುತ್ತಿರುವ ಪ್ರಧಾನಮಂತ್ರಿಗಳ ಮತ್ತು ಅವರ ತಂಡ ಇಂತಹ ಕೃತ್ಯಗಳಿಗಾಗಿ ದೇಶದ ಕ್ಷಮೆಯನ್ನು ಕೇಳಬೇಕಾಗಿತ್ತು.

ತನಿಖಾ ಸಂಸ್ಥೆಗಳನ್ನ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡು ವಿರೋಧಪಕ್ಷದ ನಾಯಕರ ವಿರುದ್ಧ ಅಸ್ತ್ರವಾಗಿ ಬಳಸಿ ಅವರನ್ನ ದುರ್ಬಲಗೊಳಿಸುವಂತಹ ಕುತಂತ್ರದ ರಾಜಕಾರಣಕ್ಕಾಗಿ ರಾಷ್ಟ್ರದ ಜನತೆಯ ಕ್ಷಮೆ ಕೇಳಬೇಕಾಗಿತ್ತು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆಯನ್ನ ಕೊಟ್ಟು ಕಳೆದ 11 ವರ್ಷದಲ್ಲಿ ಕನಿಷ್ಠ ಒಂದು ಕೋಟಿ ಉದ್ಯೋಗವನ್ನು ಸೃಷ್ಟಿಸಲಾಗದೆ ನಿರುದ್ಯೋಗದ ಪ್ರಮಾಣವನ್ನು ಹೆಮ್ಮರವಾಗಿ ಬೆಳೆಸಿದಂತಹ ನಿರುದ್ಯೋಗಿಗಳ ಬದುಕಿಗೆ ಮಾರಕವಾದ ನೀತಿಯನ್ನ ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿಗಳು ಯುವ ಜನರಿಗೆ ಉದ್ಯೋಗವನ್ನ ನೀಡದ ಕಾರಣಕ್ಕಾಗಿ ರಾಷ್ಟ್ರದ ಜನತೆಯ ಕ್ಷಮೆ ಕೇಳಬೇಕಾಗಿತ್ತು.

ಪಟ್ಟಿ ಮಾಡುತ್ತಾ ಹೋದರೆ ಪ್ರಧಾನಮಂತ್ರಿಗಳು ಮಾಡಿರುವ ತಪ್ಪುಗಳಿಗಾಗಿ ಜನರಿಗೆ ಕೊಟ್ಟ ಮಾತುಗಳನ್ನ ಉಳಿಸಿಕೊಳ್ಳದಿರುವ ಕಾರಣಕ್ಕಾಗಿ ತಾವು ಘೋಷಿಸಿದ ಯೋಜನೆಗಳು ಹಳ್ಳ ಹಿಡಿದಿರುವ ಕಾರಣಕ್ಕಾಗಿ ಕ್ಷಮೆ ಕೇಳಬೇಕಾಗಿತ್ತು. ಆದರೆ ಮತದ ಕಾರಣಕ್ಕಾಗಿ ಚುನಾವಣೆಯ ಉದ್ದೇಶಕ್ಕಾಗಿ ಮಾತ್ರ ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆಯ ಹೆಸರಿನಲ್ಲಿ ಕ್ಷಮೆಯನ್ನು ಕೇಳಿದ್ದೀರಿ. ಕರ್ನಾಟಕದಲ್ಲಿ ಸಹ ಬಿಜೆಪಿ ಪಕ್ಷದ ಶಾಸಕರು ಪರಶುರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪಂಚಲೋಹವೆಂದು ಹೇಳಿ ಹಣವನ್ನು ಪಡೆದು ಅದು ಉರುಳಿಬಿದ್ದಾಗ ತಿಳಿಯಿತು ಅದು ಕಳಪೆ ಕಾಮಗಾರಿಯ ವಿಗ್ರಹವೆಂದು. ಈ ಕಾರಣಕ್ಕಾಗಿ ಇವರು ಇಲ್ಲಿ ಕ್ಷಮೆಯನ್ನು ಕೇಳಲೇ ಇಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply