ಡಬಲ್ ಇಂಜಿನ್ ಸರ್ಕಾರದಿಂದ ಮೆಟ್ರಿಕ್ ಪೂರ್ವ ಸ್ಕಾಲರ್ ಶಿಪ್ ರದ್ದು

3 years ago

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಅಫೇರ್ಸ್ ಇಲಾಖೆಯಿಂದ ಬಂದ ಸುತ್ತೋಲೆ ಅನುಸಾರ
“ಮೆಟ್ರಿಕ್ ಪೂರ್ವ ಸ್ಕಾಲರ್ಶಿಪ್ ಅನ್ನು ಕೇವಲ 9 & 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಕೊಡಬೇಕು. 1-8 ತರಗತಿಯ ವಿದ್ಯಾರ್ಥಿಗಳು ಆರ್ ಟಿಇ 2009ರ ಅಡಿಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವುದರಿಂದ ಅವರಿಗೆ ಮೆಟ್ರಿಕ್ ಪೂರ್ವ ಸ್ಕಾಲರ್ಷಿಪ್ ಕೊಂಡುವಂತಿಲ್ಲ” ಎನ್ನುವ ನಿರ್ದಾರ ತೆಗೆದುಕೊಳ್ಳಲಾಗಿದೆ.

(ಇದರ ಪ್ರತಿಯನ್ನು ಮತ್ತು ಇದಕ್ಕೆ ಪೂರಕವಾದ ಉದಾಹರಣೆಯ ಪ್ರತಿಯನ್ನು ಲಗತ್ತಿಸಿದ್ದೇನೆ)

ಇದು ನೇರವಾಗಿ 6-14ನೆ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕೆನ್ನುವ ಮೂಲಭೂತ ಹಕ್ಕಾಗಿರುವ ಪರಿಚ್ಛೇದ 21ಎ ಮತ್ತು 0-14ನೆ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕೆನ್ನುವ ಪ್ರಭುತ್ವ ನಿರ್ದೇಶನ ತತ್ವ ಪರಿಚ್ಛೇದ 45ರ ಉಲ್ಲಂಘನೆಯಾಗುತ್ತದೆ.

ಮುಖ್ಯವಾಗಿ ಮೂಲಭೂತ ಹಕ್ಕುಗಳನ್ನು ಮತ್ತು ಜನಪರ ಕಲ್ಯಾಣ ಯೋಜನೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಬಾರದು ಎನ್ನುವ ಸಾಮಾನ್ಯ ಕನಿಷ್ಠ ತಿಳುವಳಿಕೆ ಸಹ ಈ ಇಲಾಖೆಗಳಿಗೆ ಇದ್ದಂತಿಲ್ಲ.

ಆರ್ ಟಿಇ ಕಾಯಿದೆಯ ನೀತಿಯನ್ನು ನೆಪ ಮಾಡಿಕೊಂಡು ಮೆಟ್ರಿಕ್ ಪೂರ್ವ ಸ್ಕಾಲರ್ಷಿಪ್ ನ್ನು ರದ್ದುಗೊಳಿಸುವುದರ ಮೂಲಕ ಬಡ ಕುಟುಂಬದ ಮಕ್ಕಳು, ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣವನ್ನೇ ಮೊಟಕುಗೊಳಿಸಿದಂತಾಗುತ್ತದೆ.

ಆಡಳಿತ ನಡೆಸುವವರಿಗೆ ಸಾರ್ವಜನಿಕ ಶಿಕ್ಷಣ, ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣದ ಮಹತ್ವ, ಅವಶ್ಯಕತೆ, ತಾತ್ವಿಕತೆ ಮತ್ತು ಇದಕ್ಕೂ ಪ್ರಜಾಪ್ರಭುತ್ವಕ್ಕೂ ಇರುವ ನೇರ ಸಂಬಂಧದ ಕುರಿತು ಸಹ ಈ ಪ್ರಭುತ್ವಕ್ಕೆ ತಿಳುವಳಿಕೆ ಇಲ್ಲ, ಅಥವಾ ಬೇಕಾಗಿಲ್ಲ.
ಇದು ನ್ಯಾಯಪ್ರಜ್ಞೆಯಲ್ಲ.

ಮತ್ತೊಂದೆಡೆ ಕರ್ನಾಟಕ ಸರಕಾರವು 9, 10ನೇ ತರಗತಿಯನ್ನು ಪ್ರೌಢ ಶಿಕ್ಷಣವೆಂದು ಪರಿಗಣಿಸುವಂತಿಲ್ಲ ಎನ್ನುವ ನಿರ್ಧಾರ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇದರ ಅರ್ಥವೇನು? ಯಾರು ಇದನ್ನು ಶಿಫಾರಸು ಮಾಡಿದ್ದಾರೆ? ಶಿಕ್ಷಣ ತಜ್ಞರೊಂದಿಗೆ, ಭಾಗೀದಾರರೊಂದಿಗೆ ಸಮಾಲೋಚನೆ ಮಾಡಿದ್ದಾರೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ.

ಮತ್ತು ಒಮ್ಮೆ 10ನೇ ತರಗತಿಗೆ ಮೆಟ್ರಿಕ್ಯುಲೇಷನ್ ಹಂತವನ್ನು ತೆಗೆದು ಬಿಟ್ಟರೆ ಸಹಜವಾಗಿಯೇ ಮೆಟ್ರಿಕ್ ಪೂರ್ವ ಎನ್ನುವ ನೀತಿಯನ್ನು ಸಹ ರದ್ದುಗೊಳಿಸಬಹುದು ಮತ್ತು ಈ ಮೂಲಕ ಮೆಟ್ರಿಕ್ ಪೂರ್ವ ಸ್ಕಾಲರ್ಷಿಪ್ ಅನ್ನು ಸಹ ರದ್ದುಗೊಳಿಸಬಹುದು.

ಈ ಡಬಲ್ ಇಂಜಿನ್ ಸರಕಾರದ ಸರ್ವಾಧಿಕಾರಿ ಧೋರಣೆ, ಸಂವಿಧಾನ ವಿರೋಧಿ ನೀತಿಗಳನ್ನು ಕಂಡಾಗ ಇದು ಖಂಡಿತವಾಗಿ ಉತ್ಪ್ರೇಕ್ಷೆಯಲ್ಲ.

ಮತ್ತದೇ ಯಕ್ಷ ಪ್ರಶ್ನೆ : ಹಾಗಿದ್ದರೆ ಮುಂದೇನು?
ಇಲ್ಲಿ ಯಾರು ಯಾರನ್ನು ಕೇಳಬೇಕೆಂಬುದೇ ತೋಚದಂತಹ ಪರಿಸ್ಥಿತಿಯಿದೆ.

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply