ಬೆಂಗಳೂರು: ರಾಜ್ಯದಲ್ಲಿ ಜನ ಬುದ್ಧಿವಂತರಿದ್ದಾರೆ, ಸುಳ್ಳು ಭರವಸೆಗಳನ್ನು ಕೊಟ್ಟು ಅವರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು. ಏನನ್ನು ಜಾರಿ ಮಾಡಲು ಸಾಧ್ಯವೋ ಅದನ್ನು ಮಾತ್ರ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಉಚಿತ ಭರವಸೆಗಳಿಗೆ ತಿರುಗೇಟು ನೀಡಿರುವ ಅವರು, ಇಂತಹ ಭರವಸೆಗಳ ಮೂಲಕ ಜನರನ್ನು ಭ್ರಮಾಲೋಕದಲ್ಲಿಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿಗಳ 1 ಲಕ್ಷ ಮನೆ ಬಹುಮಹಡಿ ಯೋಜನೆಯಡಿ ಯಲಹಂಕದಲ್ಲಿಂದು ನೂತನ ಮನೆಗಳ ಲೋಕಾರ್ಪಣೆ ಮತ್ತು ಹಂಚಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನ ದಡ್ಡರಲ್ಲ, ಪುಕ್ಕಟ್ಟೆ ಕೊಡುತ್ತೇವೆ ಎಂದರೆ ನಂಬೋಕೆ, ಈ ಹಣ ಬರೋದೆ ಜನರ ತೆರಿಗೆ ಹಣದಿಂದ, ಹಾಗಾಗಿ ಅಧಿಕಾರಕ್ಕೆ ಬರೋ ಉದ್ದೇಶದಿಂದ ವ್ಯವಸ್ಥೆ ಕೆಡಿಸುವ ರೀತಿ ಘೋಷಣೆಗಳನ್ನು ಮಾಡಬಾರದು ಎಂದರು.
ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿ ಅದಕ್ಕೆ ಹಣ ಮೀಸಲಿಡಲಿಲ್ಲ , ಆಡಳಿತ ನಡೆಸುವವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಭರವಸೆಗಳನ್ನು ಕೊಟ್ಟು ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದೆವು. ಈಗಾಗಲೇ 5 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ. ಮುಖ್ಯಮಂತ್ರಿಗಳ ಬಹುಮಹಡಿ 1 ಲಕ್ಷ ಮನೆ ನಿರ್ಮಾಣ ಯೋಜನೆ ಮಾಡಿದ ಹಿಂದಿನ ಸರ್ಕಾರ ಜಾಗವನ್ನೇ ಒದಗಿಸಿರಲಿಲ್ಲ. ನಾವು ಬಂದ ಮೇಲೆ 492 ಎಕರೆ ಜಮೀನು ಪಡೆದು ಮೊದಲ ಹಂತದಲ್ಲಿ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಹಂತ ಹಂತವಾಗಿ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದರು.
ಮನುಷ್ಯ ಆಸೆ ತಮ್ಮ ಕುಟುಂಬ ಸುರಕ್ಷಿತವಾಗಿರಬೇಕು ಎನ್ನುವುದು, ಪಕ್ಷಗಳು ಕೂಡ ಗೂಡುಕಟ್ಟಿ ಇರಬೇಕೆಂಬ ಬಯಕೆ ಹೊಂದಿರುತ್ತವೆ. ಹಾಗಾಗಿ ಬಡವರಿಗೆ ಮನೆ ಕಟ್ಟಿಕೊಡುವ ಕೆಲಸ ಆಗಬೇಕು. ಸರ್ಕಾರ, ಸಮಾಜ ಈ ಕೆಲಸ ಮಾಡಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಮನೆಗಳನ್ನು ಕಟ್ಟಲು ಸರಳ ನಿಯಮಗಳನ್ನು ಜಾರಿಮಾಡಬೇಕಾಗಿದೆ. ಹಾಗಾಗಿ ಎಲ್ಲರೂ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿನಲ್ಲಿ ತಿದ್ದುಪಡಿ ತರಲಾಗುವುದು ಎಂದರು.




