ಅತ್ತೆಯನ್ನೇ ಕೊಂದ ವೈದ್ಯ! ಕಾರಣವೇನು ಗೊತ್ತೇ?

8 months ago

ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಸಮೀಪ ರಸ್ತೆಯಲ್ಲಿ ಬಿದ್ದಿದ್ದ ಮೃತ ದೇಹದ ಅವಶೇಷಗಳ ಪತ್ತೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ದಂತ ವೈದ್ಯ ಸೇರಿದಂತೆ ಆತನ ಸ್ನೇಹಿತರನ್ನು ಬಂಧಿಸಿದ್ದಾರೆ. ದಂತ ವೈದ್ಯನಾಗಿರುವ ಡಾ.ರಾಮಚಂದ್ರ ತಮ್ಮ ಅತ್ತೆ ಲಕ್ಷ್ಮಿದೇವಮ್ಮ ಅವರನ್ನು ಬರ್ಭರವಾಗಿ ಹತ್ಯೆ ಮಾಡಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯ ಪಕ್ಕದಲ್ಲಿ ಎಸೆದು ಧರ್ಮಸ್ಥಳಕ್ಕೆ ಹೋಗಿದ್ದರು.

ಆಗಸ್ಟ್ 7ರಂದು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಚಿಂಪುಗಾನಹಳ್ಳಿ, ಕೋಳಾಲ ಹೋಬಳಿ ವ್ಯಾಪ್ತಿಯ ಮಧ್ಯವೆಂಕಟಾಪುರ ಹಾಗೂ ಚನ್ನರಾಯನದುರ್ಗಾ ಹೋಬಳಿ ವ್ಯಾಪ್ತಿಯ ಬೆಂಡೋಣೆ ಗ್ರಾಮದ ಬಳಿ ದೇಹದ ಕೆಲ ಅಂಗಾಂಗಗಳು ಪತ್ತೆಯಾಗಿದ್ದವು. ಅದೇ ದಿನ ರಾತ್ರಿ ಸಿದ್ಧರಬೆಟ್ಟದ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ತಲೆ ಹಾಗೂ ಉಡುಪು ಸಿಕ್ಕಿತ್ತು.

ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಕೊರಟಗೆರೆಯ ಪೊಲೀಸರಿಗೆ ಸಮೀಪದ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ನಾಪತ್ತೆ ಪ್ರಕರಣ ಸುಳಿವು ನೀಡಿತು.

ಬೆಳ್ಳಾವಿಯ ನಿವಾಸಿ ಲಕ್ಷ್ಮಿದೇವಮ್ಮ ಆ. 3ರಂದು  ಮಗಳನ್ನು ನೋಡಿ ಬರಲು ಮನೆಯಿಂದ ಹೋಗಿದ್ದರು. ಅದಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಈ ನಡುವೆ, ಲಕ್ಷ್ಮಿದೇವಮ್ಮ ಕಾಣೆಯಾದ ಬಗ್ಗೆ ಬೆಳ್ಳಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಅವರ ಕುಟುಂಬಸ್ಥರನ್ನು ಕರೆದು ವಿಚಾರಿಸಿದ್ದಾರೆ. ಇದೇ ವೇಳೆ ಅಪರಿಚಿತ ಮಹಿಳೆ ಮೃತ ದೇಹದ ಅಂಗಾಂಗಗಳು ಪತ್ತೆಯಾದ ಮಾಹಿತಿ ಕೂಡ ಲಭ್ಯವಾಗಿತ್ತು. ಇದನ್ನು ಆಧರಿಸಿ ಕಾಣೆಯಾದ ಲಕ್ಷ್ಮಿದೇವಮ್ಮ ಅವರ ಚಹರೆಯ ಕುರಿತು ಮಾಹಿತಿ ಸಂಗ್ರಹಿಸಿದ ಪೊಲೀಸರಿಗೆ ಬರ್ಭರವಾಗಿ ಹತ್ಯೆ ಆಗಿರುವುದು ಲಕ್ಷ್ಮಿದೇವಮ್ಮ ಎನ್ನುವುದು ಪತ್ತೆಯಾಯಿತು.

ಆನಂತರ ಇದರ ಜಾಡು ಹಿಡಿದು ಹೋರಾಟಾಗ ಆಕೆಯ ಅಳಿಯನೇ ಅವರನ್ನು ಹತ್ಯೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಲಕ್ಷ್ಮಿದೇವಮ್ಮ ಅವರು ವೇಶ್ಯಾವಾಟಿಕೆ ಜಾಗದಲ್ಲಿ ನಿರತರಾಗಿದ್ದು, ತಮ್ಮ ಮಗಳನ್ನು ಕೂಡ ಈ ಜಾಲದಲ್ಲಿ ಬೀಳಿಸಲು ಪ್ರಯತ್ನ ನಡೆಸಿದ್ದರು ಎಂದು ಅವರ ಅಳಿಯ ಡಾ.ರಾಮಚಂದ್ರ ತಿಳಿದು ಸಿಟ್ಟಿಗೆದ್ದಿದ್ದಾರೆ.

ತಮ್ಮ ಪತ್ನಿಯನ್ನು ವೇಶ್ಯಾವಾಟಿಕೆ ಜಾಗದಲ್ಲಿ ತೊಡಗಿಸಲು ಪ್ರೇರೇಪಿಸುತ್ತಿರುವ ತಮ್ಮ ಅತ್ತೆ ಈ ಭೂಮಿಯ ಮೇಲೆ ಇರಲೇಬಾರದು ಎಂದು ಯೋಚಿಸಿ, ಅದಕ್ಕೆ ತಕ್ಕಂತೆ ತನ್ನ ಸ್ನೇಹಿತರ ಜೊತೆ ಸೇರಿ ಹತ್ಯೆಯ ಸಂಚು ರೂಪಿಸಿದ್ದಾರೆ. ಅದರಂತೆ ಸ್ನೇಹಿತರ ಮೂಲಕ ತನ್ನ ಅತ್ತೆ ಲಕ್ಷ್ಮಿದೇವಮ್ಮ ಅವರನ್ನು ಕೋಳಾಲ ಬಳಿಯ ಫಾರ್ಮ್‌ಹೌಸ್‌ ಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಲಕ್ಷ್ಮಿದೇವಮ್ಮ ಅವರ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಿರಲಿ ಎಂದು ಮೃತ ದೇಹದ ಅಂಗಾಂಗಗಳನ್ನು ಕತ್ತರಿಸಿ ವಿವಿಧೆಡೆ  ಎಸೆದಿದ್ದಾನೆ.

ಮೃತ ದೇಹದ ಕೈ ಮೇಲಿನ ಅಚ್ಚೆ, ಮುಖದ ಮೇಲಿನ ಕೆಲವು ಗುರುತು, ಉಡುಪುಗಳ ಆಧಾರದ ಮೇಲೆ ಪೊಲೀಸರು ಕೊಲೆಯಾಗಿರುವುದು ಲಕ್ಷ್ಮಿದೇವಮ್ಮ ಎಂಬುದನ್ನು ಪತ್ತೆ ಹಚ್ಚಿದ್ದರು. ಈ ಮೃತ ದೇಹದ ಗುರುತು ಪತ್ತೆ ಸಮಯದಲ್ಲಿ ಅವರ ಅಳಿಯ ರಾಮಚಂದ್ರ ಕಾಣಿಸಿರಲಿಲ್ಲ. ಕೊಲೆಯ ನಂತರ ಧರ್ಮಸ್ಥಳ ಪ್ರವಾಸಕ್ಕೆ ಹೋಗಿದ್ದರು. ಇದು ಅನುಮಾನಕ್ಕೆ ಕಾರಣವಾಗಿತ್ತು. ಇದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಧರ್ಮಸ್ಥಳದಲ್ಲಿ ವಶಕ್ಕೆ ಪಡೆದು ಕೊರಟಗೆರೆ ಠಾಣೆಗೆ ಕರೆತಂದು ವಿಚಾರಣೆ  ನಡೆಸಿದಾಗ ಹತ್ಯೆ ಪ್ರಕರಣ ಬಯಲಾಗಿದೆ.

Leave a Reply