ಸುಂಕದ ರಸ್ತೆಗಳ ಜನಕ ಯಾರು?
ಸುಂಕದ ರಸ್ತೆಯಿಂದ ಲಾಭವಾಗಿದ್ದು ಯಾರಿಗೆ?
ಜನರನ್ನು ಇನ್ನೆಷ್ಟು ದಿನ ಸುಲಿಯಲಿವೆ ಈ ಸರಕಾರಗಳು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ!!!
ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಒಕ್ಕೂಟ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿತ್ತು. ಸನ್ಮಾನ್ಯ ವಾಜಪೇಯಿಯವರು ಪ್ರಧಾನಿಯಾದ ನಂತರ ಹಾಲಿ ಇರುವ ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿಯವರಿಂದ ಅಗಲೀಕರಿಸಿ, ಗ್ರಾಮ ಪಟ್ಟಣಗಳ ಮೇಲೆ fly over ನಿರ್ಮಾಣ ಮಾಡಿಸಿ, ವೇಗದ ವಾಹನಗಳು ಮತ್ತು ಭೋಗದ ಜನರಿಗೆ ಅನುಕೂಲ ಮಾಡಿಕೊಟ್ಟರು. ಈ ಖಾಸಗಿ ಗುತ್ತಿಗೆದಾರರಿಗೆ ರಾಷ್ಟ್ರೀಯ, ಬಹು ರಾಷ್ಟ್ರೀಯ ಖಾಸಗಿ ಬ್ಯಾಂಕುಗಳು ಯಥೇಚ್ಛವಾಗಿ ಸಾಲ ನೀಡಿದವು.
ಈ ರಸ್ತೆಯಲ್ಲಿ ಸಂಚರಿಸುವ ಜನ ರಸ್ತೆ ಸುಂಕ ಪಾವತಿಸುವ ನೂತನ ಕ್ರಮವನ್ನು ಜಾರಿಗೊಳಿಸಲಾಯಿತು. ಈ ರಸ್ತೆಯಲ್ಲಿ ಸಂಗ್ರಹವಾಗುವ ಶುಲ್ಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಖಾಸಗಿ ಗುತ್ತಿಗೆದಾರರಿಗೆ ವರ್ಷಗಟ್ಟಲೆ ಪಾವತಿಸುತ್ತವೆ.
ನೋಡಿ ರಸ್ತೆ ಅಗಲೀಕರಣಕ್ಕಾಗಿ ಜಾಮೀನು ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಳ್ಳುವ ಪ್ರಜೆ, ರಸ್ತೆ ಸುಂಕ ಪಾವತಿಸುವ ಪ್ರಯಾಣಿಕರು ಲೆಕ್ಕಕ್ಕೆ ಇಲ್ಲ. ಎಷ್ಟು ಜಾಣತನದಿಂದ ಒಕ್ಕೂಟ ಸರ್ಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮತ್ತು ನಿರ್ವಹಣೆಯ ಜವಾಬ್ದಾರಿಯಿಂದ ತಪ್ಪಿಸಿಕೊಂಡಿತು.

ರಸ್ತೆ ನಿರ್ಮಾಣದ ಕ್ರೆಡಿಟ್ ಮಾತ್ರ ವಾಜಪೇಯಿಯವರಿಗೆ. ಈ ಜನ ವಿರೋಧಿ ನೀತಿಯನ್ನು ಮನಮೋಹನ್ ಸಿಂಗ್ ಸರ್ಕಾರವೂ ಅನುಸರಿಸಿತು. ಉದಾಹರಣೆಗೆ ಬೆಂಗಳೂರು – ಕೋಲಾರ old Madras road, ಬೆಂಗಳೂರು ಏರ್ ಪೋರ್ಟ್ ರೋಡ್ ಮುಂತಾದವು. ಹೀಗೆ ಸರ್ಕಾರಗಳು ತಮ್ಮ ಪ್ರಜೆಗಳಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ. ಎಲ್ಲವನ್ನೂ World Bank, IMF, WTO ಗಳು ನಿಯಂತ್ರಿಸುತ್ತಿವೆ. ಈ ಪ್ರಧಾನಿ / ಮುಖ್ಯಮಂತ್ರಿಗಳು, ಸರ್ಕಾರ , ಅಧಿಕಾರಶಾಹಿ ಎಲ್ಲವೂ ಸೂತ್ರದ ಬೊಂಬೆಗಳು.
ವಾಜಪೇಯಿಯವರು ರಾಷ್ಟ್ರೀಯ ಹೆದ್ದಾರಿಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ಸತ್ಯೇಂದ್ರ ದುಬೆ ಎನ್ನುವ IES Indian Engineering Service ಯುವ ಅಧಿಕಾರಿ ಈ ಯೋಜನೆಯಲ್ಲಿನ ಸಾಧಕ ಬಾಧಕಗಳನ್ನು ಮತ್ತು ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತಾಗಿ ಒಂದು ವರದಿಯನ್ನು ತಯಾರಿಸಿ ಪ್ರಧಾನಿ ವಾಜಪೇಯಿಯವರ ಕಾರ್ಯಾಲಯಕ್ಕೆ ತಲುಪಿಸಿದರಂತೆ. ಕೆಲವೇ ದಿನಗಳಲ್ಲಿ ಸತ್ಯೇಂದ್ರ ದುಬೆ ಕೊಲೆಯಾದರು.
ಹಿರಿಯ ರಾಜಕಾರಣಿಗಳು ಉದ್ಯಮಿಗಳು ರಿಯಲ್ ಎಸ್ಟೇಟ್ ಕುಳಗಳು ಯಾವುದಾದರೊಂದು ವಾಹನ ದಟ್ಟಣೆಯ ರಸ್ತೆಯ ಮೇಲೆ ಮೊದಲು ಕಣ್ಣು ಹಾಕುತ್ತಾರೆ. ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಎಕರೆ ರೈತರ ಜಮೀನು ಖರೀದಿಸುತ್ತಾರೆ. ನಂತರ ಸರ್ಕಾರದಿಂದ ರಸ್ತೆ ಅಗಲೀಕರಣದ ಅಧಿಸೂಚನೆ ಹೊರಡಿಸುತ್ತಾರೆ. ಅವರಲ್ಲಿಯೇ ಒಬ್ಬನಿಗೆ ಹೆದ್ದಾರಿ ಅಗಲೀಕರಣದ ಗುತ್ತಿಗೆ ದೊರೆಯುತ್ತದೆ. ಗುತ್ತಿಗೆದಾರನಿಗೆ ರಾಷ್ಟ್ರೀಯ ಅಂತರಾಷ್ಟ್ರೀಯ ಅಥವಾ ಖಾಸಗಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಕೊಡಿಸುತ್ತಾರೆ. ಆ ಹಣದ ಸುಮಾರು ಅರ್ಧ ಭಾಗದಲ್ಲಿ ರಸ್ತೆ ನಿರ್ಮಿಸಿ ಆ ಭಾಗದ ಸಂಸದರಿಗೆ ಬಂಗ್ಲೆ ಕಟ್ಟಿಕೊಡುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ.
ರಸ್ತೆ ಸಂಪೂರ್ಣ ನಿರ್ಮಾಣವಾಗುವ ಮುನ್ನವೇ ಸಂಚರಿಸುವ ವಾಹನಗಳಿಂದ ಸುಂಕ ವಸೂಲಾತಿ ಶುರುವಾಗುತ್ತದೆ. ಇದು ಎಷ್ಟು ವರ್ಷಕ್ಕೆ ಮುಗಿಯುತ್ತದೆ ಎಂಬುದು ದೇವನೇ ಬಲ್ಲ… ಈಗ ಬೆಂಗಳೂರು ಮತ್ತು ಮೈಸೂರು ರಸ್ತೆ ಸುಂಕ ವಿಧಿಸುವ ಜಟಾಪಟಿ ಕೆಲ ದಿನಗಳಷ್ಟೇ. ನಂತರ ಗುತ್ತಿಗೆದಾರ ಮತ್ತು NHAI ಎಲ್ಲಾ ಪಕ್ಷಗಳ ನಾಯಕರನ್ನು ಹೋರಾಟಗಾರರನ್ನು ತಮ್ಮದೇ ಮಾರ್ಗದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತವೆ.
– ಜಿ ಟಿ ನರೇಂದ್ರ ಕುಮಾರ್, ವಕೀಲರು, ಬೆಂಗಳೂರು




