ಬೆಂಗಳೂರು: ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸೋದರ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಮಹತ್ವದ ಜವಾಬ್ದಾರಿಯೊಂದನ್ನು ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದಕ್ಕಾಗಿ ಅವರಿಗೆ ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ.
ಸಂಪುಟ ದರ್ಜೆಯ ಸಚಿವ ಸ್ಥಾನ ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನದ ಮೇಲೆ ಡಿ ಕೆ ಸುರೇಶ್ ಕಣ್ಣಿಟ್ಟಿರುವುದು ಇದೀಗ ಹೊಸ ಸುದ್ದಿ ಏನಲ್ಲ. ಆದರೆ ಅವರು ಇದೀಗ ಆ ಹುದ್ದೆಯ ಸನಿಹಕ್ಕೆ ಬಂದು ನಿಂತಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇದರ ಮೊದಲ ಹಂತವಾಗಿ ಅವರು ಈಗ ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ (ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಮೂಲ್ ನ ತಮ್ಮ ಬೆಂಬಲಿಗ ನಿರ್ದೇಶಕರು, ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳೊಂದಿಗೆ ಅವರು ಬೆಂಗಳೂರು ಡೇರಿ ವೃತ್ತದಲ್ಲಿರುವ ಬಮೂಲ್ ಕಚೇರಿಯಲ್ಲಿ ಅವರು ಅಧ್ಯಕ್ಷ ಸ್ಥಾನಕ್ಕೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ಸ್ಥಾನಕ್ಕೆ ಬೇರೆ ಯಾರೂ ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ (ಬಮೂಲ್)ನಲ್ಲಿ 16 ನಿರ್ದೇಶಕರ ಪೈಕಿ 14 ಜನ ಚುನಾವಣೆ ಮೂಲಕ ಆರಿಸಲಾಗಿದ್ದು, ಇಬ್ಬರು ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದಾರೆ. ಬಮೂಲ್ ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ, ಮಾಗಡಿ ತಾಲೂಕಿನ ಕುದೂರು ರಾಜಣ್ಣ ಅವರನ್ನು ಉಪಾಧ್ಯಕ್ಷರನ್ನಾಗಿ ಎಲ್ಲಾ ನಿರ್ದೇಶಕರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಎಂದರು.
ನಮ್ಮ ಪಕ್ಷದ ಅಧ್ಯಕ್ಷರಾದ ಡಿಸಿಎಂ ಡಿ.ಕೆ. ಶಿವಕುಮಾರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಬಾಲಕೃಷ್ಣ, ಸಿ.ಪಿ. ಯೋಗೇಶ್ವರ್, ಇಕ್ಬಾಲ್ ಹುಸೇನ್, ಶಿವಣ್ಣ, ಶರತ್ ಬಚ್ಚೇಗೌಡ, ಕೃಷ್ಣಭೈರೇಗೌಡರು ಸೇರಿದಂತೆ ಬಮೂಲ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಸಕರ ಸರ್ವಸಮ್ಮತದ ತೀರ್ಮಾನದಂತೆ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಲ್ಲರಿಗೂ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದು ನಡೆದ ಚುನಾವಣೆಯಲ್ಲಿ ಸಹಕಾರ ಸಂಸ್ಥೆ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಈ ಒಕ್ಕೂಟದ ಹಾಲು ಉತ್ಪಾದಕರು, ರೈತ ಬಾಂಧವರು ನಮ್ಮ ಮೇಲೆ ನಿರೀಕ್ಷೆ ಇಟ್ಟು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಅವರಿಗೂ ಧನ್ಯವಾದ ತಿಳಿಸುತ್ತೇನೆ. ಹಾಲು ಉತ್ಪಾದಕರು, ನಿರ್ದೇಶಕರು ಬದಲಾವಣೆ ತರುವ ನಿರೀಕ್ಷೆ ಹೊಂದಿದ್ದು, ಎಲ್ಲರ ಸಹಕಾರ ಪಡೆದು ಬೆಂಗಳೂರು ಸಹಕಾರ ಹಾಲು ಒಕ್ಕೂಟ ಹಾಗೂ ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ನಾವು ಪರಿಸರ ಸ್ನೇಹಿ ಹಾಲಿನ ಪ್ಯಾಕೆಟ್ ಅನ್ನು ಪರಿಚಯಿಸಿದ್ದು, ಇದನ್ನು ಬೆಂಗಳೂರಿಗೆ ಮಾತ್ರವಲ್ಲ ಕರ್ನಾಟಕ ರಾಜ್ಯಾದ್ಯಂತ ಪರಿಚಯಿಸುವ ಚಿಂತನೆ ಇದೆ. ಪ್ರಾಯೋಗಿಕವಾಗಿ ಒಂದು ಪಂಚಾಯ್ತಿ ಮಟ್ಟದಲ್ಲಿ ಇದನ್ನು ವಿತರಣೆ ಮಾಡಿದ್ದೇವೆ. ಮುಂದಿನ ಆಡಳಿತ ಮಂಡಳಿಯಲ್ಲಿ ಇದರ ಸಾಧಕ ಬಾಧಕಗಳನ್ನು ವಿಸ್ತೃತವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು. ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿ, ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಹಂತಹಂತವಾಗಿ ಇದನ್ನು ಮಾಡುತ್ತೇವೆ ಎಂದರು.
ಇದಾದ ನಂತರ ಕೆಎಂಎಫ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಎಲ್ಲಾ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಇದರ ಮತದಾರರಾಗಿರುತ್ತಾರೆ ಜೊತೆಗೆ ಸರ್ಕಾರ ಕೂಡ ಕೆಲವು ನಿರ್ದೇಶಕರನ್ನು ನಾಮಕರಣ ಮಾಡಲಿದ್ದು ಡಿಕೆ ಸುರೇಶ್ ಅವರು ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಹುದ್ದೆ ಅಲಂಕರಿಸುವುದು ನಿಶ್ಚಿತ ಎಂದು ಹೇಳಲಾಗಿದೆ.




