ಸಿಬ್ಬಂದಿ ಸಮವಸ್ತ್ರವನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಪೂರೈಸುವ ಬಗ್ಗೆ ಚರ್ಚೆ: ಶಿವಾನಂದ ಪಾಟೀಲ್

3 years ago

#Discussion #supply #staff #uniforms #Handloom #Development #Corporation #SivanandaPatil

ಬೆಂಗಳೂರು: ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಮವಸ್ತ್ರವನ್ನು ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಪೂರೈಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಲಾಗುವುದು ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಗೆ ತಿಳಿಸಿದರು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಚರ್ಚೆಯಲ್ಲಿ ಸಂದರ್ಭದಲ್ಲಿ ಬಿಜೆಪಿಯ ಸಿದ್ದು ಸವದಿ ಮಾಡಿದ ಪ್ರಸ್ತಾಪಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಅವರು, ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಹೆಚ್ಚು ಕೆಲಸ ಕೊಟ್ಟಷ್ಟು ನೇಕಾರರಿಗೆ ಅನುಕೂಲವಾಗಲಿದೆ ಎಂದರು.

ತಾವು ಸಚಿವರಾದ ಮೇಲೆ ಸಮವಸ್ತ್ರ ಪೂರೈಸಲು ಯಾವ ಮಾರ್ವಾಡಿಗೂ ಅನುಕೂಲ ಮಾಡಿಕೊಟ್ಟಿಲ್ಲ. ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ತನಿಖೆಗೆ ಶಿಕ್ಷಣ ಇಲಾಖೆ ಆದೇಶಿಸಿದೆ ಎಂದು ಸ್ಪಷ್ಟಪಡಿಸಿದರು.

ಕಳಪೆ ಬಟ್ಟೆ: ಇದಕ್ಕೂ ಮುನ್ನ ಮಾತನಾಡಿದ ಸಿದ್ದು ಸವದಿ, ವಿದ್ಯಾ ವಿಕಾಸ ಯೋಜನೆಯಡಿ ಪೂರೈಸಿದ ಶಾಲಾ ಮಕ್ಕಳ ಸಮವಸ್ತ್ರ ಕಳಪೆಯಾಗಿದೆ ಎಂದು ಆರೋಪಿಸಿ, ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಮವಸ್ತ್ರವನ್ನು ಪರಿಶೀಲನೆ ಮಾಡಿರುತ್ತಾರೆ. ಅವರ ವಿರುದ್ದವೂ ತನಿಖೆ ಮಾಡಬೇಕು ಎಂದರು.

ನಿಗಮ ಸಮವಸ್ತ್ರ ಸರಬರಾಜು ಮಾಡುವುದರಿಂದ ನೇಕಾರರಿಗೆ ಸಾಕಷ್ಟು ಅನುಕೂಲವಾಗುತ್ತಿತ್ತು. ನೇಕಾರರ ಬದಲಿಗೆ ಮಾರ್ವಾಡಿ ಉದ್ದಾರ ಮಾಡಲು ಹೊರಟ್ಟೀದ್ದೀರ ಎಂದು ಆರೋಪಿಸಿದರು.

ಅಪ ಪ್ರಚಾರ ಬೇಡ: ವಿಧಾನಸಭೆ ಚುನಾವಣೆ ವೇಳೆ 200 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈಗ ಸರಾಸರಿ ಪರಿಗಣಿಸುವುದು ಸರಿಯಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂಧನ ಸಚಿವ ಕೆ.ಜೆ.ಜಾರ್ಜ್ ಗೃಹಜ್ಯೋತಿ ವಿಷಯವಾಗಿ ಪ್ರತಿಪಕ್ಷಗಳು ಅನಗತ್ಯವಾದ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನ ಸಾಮಾನ್ಯರು ಗೃಹ ಬಳಕೆಗೆ ಎಷ್ಟು ಅಗತ್ಯವೋ ಅಷ್ಟೇ ವಿದ್ಯುತ್ ಅನ್ನು ಸರ್ಕಾರ ನೀಡುತ್ತಿದೆ. ಜನ ಸಂತೋಷದಿಂದಿದ್ದಾರೆ. ಯಾವುದೇ ಬೆಂಬಲವಿಲ್ಲದೆ ಯೋಜನೆ ಜಾರಿಯಾಗುತ್ತಿದೆ. ಇದು ಐತಿಹಾಸಿಕವಾದ ನಿರ್ಣಯ ಎಂದು ತಿಳಿಸಿದರು.

ರಾಜ್ಯದಲ್ಲಿ 2.16 ಕೋಟಿ ಆರ್ ಆರ್ ಸಂಖ್ಯೆಗಳಿವೆ. ಅದರಲ್ಲಿ 2.14 ಕೋಟಿ ಸಂಪರ್ಕಗಳು ಗೃಹಜ್ಯೋತಿಗೆ ಅರ್ಹತೆ ಪಡೆದಿವೆ 200 ಯುನಿಟ್‍ವರೆಗೆ ಬಳಕೆಯಾಗುವ ವಿದ್ಯುತ್‍ಗೆ ವಾರ್ಷಿಕ ಸರಾಸರಿ ಪರಿಗಣಿಸಿ ಸೌಲಭ್ಯ ನೀಡಲಾಗುತ್ತಿದೆ. ಈವರೆಗೂ 1 ಕೋಟಿಗೂ ಹೆಚ್ಚು ಮಂದಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಯೋಜನೆಯಡಿ ಸುಮಾರು 40 ಲಕ್ಷ ಗ್ರಾಹಕರಿದ್ದಾರೆ. ಅವರನ್ನೂ ಗೃಹಜ್ಯೋತಿ ವ್ಯಾಪ್ತಿಗೆ ಒಳಪಡಿಸಿದರೆ ನೋಂದಣಿಯಾಗುವ ಗ್ರಾಹಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಿದರು.

Leave a Reply