ಎಸ್ ಐ ಟಿ ರಚಿಸಿದ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೃತಜ್ಞತೆ

7 months ago

ಬೆಂಗಳೂರು: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ಬಗ್ಗೆ ತನಿಖೆ ನಡೆಸಲು ಎಸ್ ಐ ಟಿ ರಚಿಸಿದ ರಾಜ್ಯ ಸರ್ಕಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಐ ಟಿ ರಚನೆಯಿಂದಾಗಿ ಸತ್ಯ ಸಂಗತಿ ಹೊರಬಿದ್ದಿದೆ. ತನಿಖಾ ತಂಡ ಯಾವುದೇ ಒತ್ತಡ ಮತ್ತು ಮುಲಾಜಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ಮೂಲಕ ಸತ್ಯಸಂಗತಿ ಹಾಗೂ ಪಿತೂರಿ ಬೆಳಕಿಗೆ ತಂದಿದೆ ಎಂದರು.

ಧರ್ಮಸ್ಥಳ ದೇಗುಲ ಬೇರೆ ಅಲ್ಲ, ಧರ್ಮಸ್ಥಳದ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ಅಂತ ನೀವು ನೋಡಿದ್ದೀರಿ. ನನ್ನ ಮೇಲೆ ಯಾಕೆ ಇಷ್ಟು ದ್ವೇಷ ಇದೆ ಎಂದು ಗೊತ್ತಾಗಿಲ್ಲ. ನಾವು ಯಾರನ್ನೂ ಹೀಯಾಳಿಸಿಲ್ಲ, ದ್ವೇಷ ಕೂಡ ಮಾಡಿಲ್ಲ. ಹೀಗಿದ್ದರೂ ಇಷ್ಟು ಶತ್ರುತ್ವ ಯಾಕೆ ಎಂಬುದು ಅರ್ಥವಾಗ್ತಿಲ್ಲ. ನಾವು ತಪ್ಪು ಮಾಡದ ಕಾರಣ ಆತ್ಮವಿಶ್ವಾಸವಿದ್ದು, ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯೇ ಎಲ್ಲವನ್ನ ನೋಡಿಕೊಳ್ತಾರೆ ಎಂದರು.

ಹಗೆತನ, ಅಪವಾದ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ. ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷಗಳ ಕಾಲ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವೆಲ್ಲರೂ ಗಮನಿಸಿದ್ದೀರಿ ಎಂದರು.

ಅನೇಕ ಪುಸ್ತಕಗಳನ್ನು ನಾನು ಓದುತ್ತಿದ್ದೇನೆ. ಸಿದ್ಧಗಂಗಾ ಶ್ರೀಗಳ ಹಲವು ಪುಸ್ತಕಗಳನ್ನು ನಾನು ಓದಿದ್ದೇನೆ. ಸಿದ್ದಗಂಗಾ ಶ್ರೀಗಳು 108 ವರ್ಷಗಳ ಕಾಲ ಬದುಕಿದವರು. ಅವರು ಹೇಳಿದ ಮಾತು, ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಅಂತ. ನಾವಿಲ್ಲಿ ನಿಮಿತ್ತ ಮಾತ್ರ. ನಮ್ಮ ಸೇವೆ, ಕಾರ್ಯಗಳನ್ನು ನಾವು ಮಾಡಿದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗಿದ್ದು, ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಿಂದ ಟೀಕೆ ಮಾಡಿದರೆ. ಆದರೆ ಇವರು ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲಿಸಿದರೂ ಕಡಿಮೆಯೇ ಎಂದರು.

ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ಎಸ್ ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯದಿಂದ ಮಾತನಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೇ ಉಳಿದಿದೆ. ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬೆಂಗಳೂರು ಅಥವ ಎಲ್ಲೋ ಕೂತು ಟೀಕೆ ಮಾಡೋರು ನಮಗೆ ಬೇಡ. ನಮಗೆ ನಮ್ಮವರು ಬೇಕು, ನಮ್ಮ ಜೊತೆ ನಿಲ್ಲೋರು ಬೇಕು. ನಮ್ಮ ಮೇಲೆ ಪ್ರೀತಿ ತೋರಿದ ಎಲ್ಲಾ ಹೆಣ್ಣುಮಕ್ಕಳಿಗೂ ನಾನು ಆಭಾರಿ ಎಂದರು.

Leave a Reply