ರಾಷ್ಟ್ರಧ್ವಜದ ಹೆಸರಿನಲ್ಲಿ ಹನುಮಧ್ವಜ ಹಾರಿಸಿದ ಭಕ್ತರು: ಪ್ರಕ್ಷುಬ್ಧ ವಾತಾವರಣ ನಿರ್ಮಾಣ

2 years ago

ಮಂಡ್ಯ: ಹನುಮಧ್ವಜ ತೆರವು ವಿವಾದ ಮಂಡ್ಯದ ಕೆರಗೋಡಿನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಹಲವು ಬಾರಿ ಲಾಠಿ ಪ್ರಯೋಗ ಮಾಡಬೇಕಾಯಿತು.

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿ ನಡೆದ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆನಪಿಗಾಗಿ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ಥಂಭದಲ್ಲಿ ಹನುಮ ಧ್ವಜ ಹಾರಿಸಲಾಗಿತ್ತು.ಆದರೆ ಅತಿ ಎತ್ತರದಲ್ಲಿ ಧ್ವಜ ಹಾರಿಸಲು ಪಡೆದ ಪರವಾನಗಿಯಲ್ಲಿ ರಾಷ್ಟ್ರಧ್ವಜ ಹೊರತುಪಡಿಸಿ ಬೇರೆ ಯಾವುದೇ ಧ್ವಜ ಹಾರಿಸುವುದಿಲ್ಲ ಎಂದು ಗ್ರಾಮಸ್ಥರು ಮುಚ್ಚಳಿಕೆ ಬರೆದು ಕೊಟ್ಟಿದ್ದರು.

ತ್ರಿವರ್ಣ ಮತ್ತು ಕನ್ನಡ ಬಾವುಟ ಹಾರಿಸಲು ಅನುಮತಿ ಪತ್ರ

ಆದರೆ ಇದನ್ನು ಮರೆ ಮಾಚಿ ಹನುಮಧ್ವಜ ಹಾರಿಸಿದ್ದರು. ಇದನ್ನು ಕಂಡ ಪೊಲೀಸರು ಧ್ವಜವನ್ನು ತೆರವುಗೊಳಿಸಿದರು. ಇದನ್ನು ವಿರೋಧಿಸಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ, ಧ್ವಜ ಮತ್ತೆ ಹಾರಿಸಲು ಮುಂದಾದರು. ಇದಕ್ಕೆ ಪೊಲೀಸರು ಅಡ್ಡಿಪಡಿಸಿದರು. ಇದನ್ನು ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಗ್ರಾಮದ ಕೆಲವು ಯುವಕರು ನಡೆಸಿದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆಯಿತು. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ಮಾಡಿದರು.

ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೆರಗೋಡು ಗ್ರಾಮಸ್ಥರು ಬರೆದುಕೊಟ್ಟ ಮುಚ್ಚಳಿಕೆ ಪತ್ರ

ಮತ್ತೊಂದೆಡೆ ಹನುಮ ಧ್ವಜ ಇಳಿಸಿದ್ದರ ವಿರುದ್ಧ ಆಕ್ರೋಶ ಹೊರಹಾಕಿದ ಕೆರೆಗೋಡು ಗ್ರಾಮಸ್ಥರು ಮಂಡ್ಯ-ಯಡಿಯೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಫ್ಲೆಕ್ಸ್ ಹರಿದು, ಒಲೆ ಹಚ್ಚಿ, ರಸ್ತೆಯಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾದರು. ಆದರೆ ಇದಕ್ಕೆ ಆಸ್ಪದ ನೀಡದ ಪೊಲೀಸರು ಅಡುಗೆ ಮಾಡುವುದನ್ನ ತಡೆದಿದ್ದಾರೆ. ಅಡುಗೆ ಪಾತ್ರೆಗಳಲ್ಲಿದ್ದ ನೀರನ್ನು ಸುರಿದು, ಪಾತ್ರೆಯನ್ನು ಹೊತ್ತೊಯ್ದರು.

ಮತ್ತೊಂದೆಡೆ, ಗ್ರಾಮ ಪಂಚಾಯ್ತಿ ಸದಸ್ಯರೊಂದಿಗೆ ಸೇರಿ ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಿದರು. ಇದರ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಭಟನಾಕಾರರ ಜೊತೆ ಮಾತನಾಡಿ ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿದರು.

ಇದೇ ವೇಳೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಅವರು ರಾಮ, ಹನುಮ ವಿರೋಧಿಯಾಗಿದ್ದಾರೆ. ಹಿಂದೂಗಳ ವಿರೋಧಿ ಸರ್ಕಾರ ಉಳಿಯಬಾರದು. ಹನುಮಧ್ವಜ ಇಳಿಸಲು ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ಹನುಮ ಹುಟ್ಟಿದ ನಾಡಲ್ಲಿ ಹನುಮನಿಗೆ ಈ ಸರ್ಕಾರ ಅವಮಾನ, ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಬೆಳಿಗ್ಗೆ 9 ಗಂಟೆಗೆ ಒಳಗೆ ರಾಷ್ಟ್ರ ಧ್ವಜಹಾರಿಸಬೇಕು ಎಂಬ ನಿಯಮವಿದೆ. ಆದರೆ ನಾನು ಬರುತ್ತೇನೆ ಎಂದು ಮಧ್ಯಾಹ್ನ ಮೂರು ಗಂಟೆಗೆ ವೇಳೆಗೆ ಧ್ವಜ ಹಾರಿಸಿದ್ದಾರೆ. ಪೊಲೀಸರು ಶೂ ಧರಿಸಿ ಧ್ವಜಾರೋಹಣ ನಡೆಸಿದ್ದಾರೆ. ಗೂಂಡಾಗಿರಿ, ದೌರ್ಜನ್ಯ ಎಸಗಿ, ಹನುಮ ಧ್ವಜ ಇಳಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಹನುಮ ಧ್ವಜ ತೆರವು ಪ್ರಶ್ನಿಸಿದ್ದಕ್ಕೆ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ. ಮಧ್ಯಾಹ್ನ ರಾಷ್ಟ್ರಧ್ವಜ ಹಾರಿಸಿದ ಅಧಿಕಾರಿಯನ್ನು ಅಮಾನತುಗೊಳಿಸಲಿ. ಸ್ಥಳಕ್ಕೆ ಆಗಮಿಸುತ್ತಿದ್ದ ನನ್ನನ್ನು ಮಾರ್ಗಮಧ್ಯೆ ತಡೆಯಲು ಯತ್ನಿಸಿದರು. ಇವರ ಮನಸ್ಸಿನಲ್ಲಿ ಟಿಪ್ಪುಸುಲ್ತಾನ್ ಇದ್ದಾನೆ ಎಂದರು.

Leave a Reply