ದೇವೇಗೌಡರದು ಇಪ್ಪತ್ನಾಲ್ಕು ಗಂಟೆ ರಾಜಕಾರಣ ಅಂದರೆ ಅದು ದ್ವೇಷದ, ಹಗೆತನದ, ಸ್ವಾರ್ಥದ ರಾಜಕಾರಣ

2 years ago

1994ರಲ್ಲಿ ಜೆಡಿಎಸ್ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಮಾನ್ಯ ದೇವೇಗೌಡರು ಮುಖ್ಯಮಂತ್ರಿಗಳಾದರು. ಆಗ ಲಂಕೇಶ್ ‘ಇಂದು ಕರ್ನಾಟಕದ ಹಳ್ಳಿಗಳಲ್ಲಿ ವಾಸಿಸುತ್ತಿರುವ ದಲಿತರು ಬೆಚ್ಚಿ ಬಿದ್ದಿದ್ದಾರೆ, ಆತಂಕಿತರಾಗಿದ್ದಾರೆ’ ಎನ್ನುವ ಅರ್ಥದ ಸಾಲುಗಳನ್ನು ಬರೆದರು. ಇದು ಉತ್ಪ್ರೇಕ್ಷೆಯಲ್ಲ. ಹಾಸನ ರಾಜಕಾರಣದ ಆಳ ಅಗಲ ಬಲ್ಲವರು ಇದಕ್ಕೆ ಸಾಕಷ್ಟು ದಾಖಲೆ ಒದಗಿಸುತ್ತಾರೆ.

ದೇವೇಗೌಡರದು ಇಪ್ಪತ್ನಾಲ್ಕು ಗಂಟೆ ರಾಜಕಾರಣ ಅಂದರೆ ಅದು ದ್ವೇಷದ, ಹಗೆತನದ, ಸ್ವಾರ್ಥದ ರಾಜಕಾರಣ ಎಂದು ಹೇಳಿದರೆ ಆಕ್ಷೇಪಿಸುವವರು ಕಡಿಮೆ.

ಹಿರಿಯ ರಾಜಕಾರಣಿಗಳಾದ ವೈ. ಕೆ. ರಾಮಯ್ಯನವರು, ನಾಗೇಗೌಡರು, ಬೈರೇಗೌಡರು, ಪುಟ್ಟಸ್ವಾಮಿ ಗೌಡರು, ಕೆ. ವೆಂಕಟಗಿರಿ ಗೌಡರು ಮುಂತಾದ ಒಕ್ಕಲಿಗ ಮುಖಂಡರ ವಿರುದ್ಧ ಹಗೆತನ ಸಾಧಿಸಿದ ದೇವೆಗೌಡರು ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಲು ಶ್ರಮಿಸಿದರು, ಭಾಗಶಃ ಯಶಸ್ವಿಯಾದರು. ಈಗಲೂ ಇದರ ಕುರಿತು ಪ್ರಾಯಶ್ಚಿತ್ತವಿಲ್ಲ ಎಂದರೆ ….

ಅರ್ಥಶಾಸ್ತ್ರಜ್ಞರಾಗಿದ್ದ ಕೆ. ವೆಂಕಟಗಿರಿ ಗೌಡರು ಬೆಂಗಳೂರು ದಕ್ಷಿಣದಿಂದ ಹತ್ತನೇ ಲೋಕಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಇವರು ದೇವೆಗೌಡರ ವಿರುದ್ಧ ಯಾವುದೇ ಪರಿ ರೊಚ್ಚಿಗೆದ್ದಿದ್ದರು ಎಂದರೆ ಇವರು ಬರೆದ

H.D. Deve Gowda-The King of Corruption and Unmaking of India and From Order to Anarchy, Politics and Economics of the United Front Government ಎನ್ನುವ ಎರಡು ಪುಸ್ತಕಗಳು ಸಾಕ್ಷಿ.

ಅಲ್ಪಕಾಲ ಅವಧಿಗೆ ಪ್ರಧಾನ ಮಂತ್ರಿಯಾಗಿದ್ದಾಗ ದಕ್ಷತೆ ಮತ್ತು ರೂಪಿಸಿದ ಕಾರ್ಯಯೋಜನೆಗಳಿಗಾಗಿ ಗಳಿಸಿದ ಒಳ್ಳೆಯ ಹೆಸರನ್ನು ಇವರೊಳಗಿನ ಕೇಡಿತನವೇ ಅಳಿಸಿಹಾಕಿತು.

ದಾಸ್ತೋವೆಸ್ಕಿಯ ‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯಲ್ಲಿ” ಬದುಕಿರುವುದರ ಆಧಾರದ ಮೇಲೆ ಮಾತ್ರ ಮನುಷ್ಯನ ಆಸ್ತಿತ್ವದ ಪ್ರಶ್ನೆ ಅಡಗಿರುವುದಿಲ್ಲ, ಬದಲಿಗೆ ಬದುಕಲಿಕ್ಕಾಗಿ ಏನನ್ನಾದರೂ ಗಳಿಸಬೇಕು ಎಂಬುದರ ಮೇಲೆ ನಿಂತಿದೆ” ಎನ್ನುವ ಮಾತು ಬರುತ್ತದೆ.

ಈ ಸಾಲುಗಳು ಮನುಷ್ಯರ ವ್ಯಕ್ತಿತ್ವ ಮತ್ತು ಮಾನಸಿಕ ಸ್ಥಿತಿಯ ಆಧಾರದಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುತ್ತದೆ. ದೇವೆಗೌಡರ ವಿಷಯದಲ್ಲಿ ಸ್ವಾರ್ಥ ಮತ್ತು ಹಗೆತನಕ್ಕಾಗಿ ಏನನ್ನಾದರೂ ಮಾಡಬಲ್ಲೆ ಎನ್ನುವ ಗುಣದಿಂದಾಗಿ ಚರ್ಚೆಗೆ ಒಳಪಡುತ್ತದೆ, ಹೊರತಾಗಿ ದೀರ್ಘಕಾಲ ಆರೋಗ್ಯದಿಂದ ಬದುಕಿದರು ಎನ್ನುವ ಕಾರಣಕ್ಕಾಗಿ ಅಲ್ಲ.

ಮನಮೋಹನ್ ಸಿಂಗ್ ರಂತಹ ಸಜ್ಜನ, ಸಂಕೋಚದ ರಾಜಕಾರಣಿ ‘ಇತಿಹಾಸ ನನ್ನ ಕುರಿತು ದಯಾಳುವಾಗಿರುತ್ತದೆ’ ಎಂದು ಹೇಳಿದಾಗ ಅವರ ಅಭಿಮಾನಿಗಳು ಮತ್ತು ಸೈದ್ಧಾಂತಿಕ ವಿರೋಧಿಗಳು ಅದನ್ನು ಅನುಮೋದಿಸಿದರು.

ಆದರೆ ದೇವೆಗೌಡರ ವಿಷಯದಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯ ಮೂರೂ ಕಾಲಘಟ್ಟಗಳು ಕಟು ವಿಮರ್ಶಾತ್ಮಕವಾಗಿರುತ್ತದೆ, ಅವರ ವ್ಯಕ್ತಿತ್ವ ಮತ್ತಷ್ಟು ಪತನಗೊಳ್ಳುತ್ತಿರುತ್ತದೆ.

ತಮಗಿರುವ ಅಗಾಧ ಅನುಭವವನ್ನು ವ್ಯರ್ಥಗೊಳಿಸಿಕೊಂಡ ದೇವೆಗೌಡರು ಇಂದು ಬಾಯಿ ಬಿಟ್ಟಷ್ಟು ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ತಿರಸ್ಕೃತರಾಗುತ್ತಿದ್ದಾರೆ. ಬಹುಶಃ ‘ಮಾಡಿದ್ದುಣ್ಣೋ ಮಾರಾಯ’ ಅಂದರೆ ಇದೇ ಇರಬೇಕು.

– ಬಿ. ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply