ಜಗತ್ತಿನ ಶಾಂತಿಗಾಗಿ ಉಕ್ರೇನ್ – ರಷ್ಯಾ ನಡುವಿನ ಯುದ್ಧ ನಿಲ್ಲಲಿ

4 years ago

ಚಿತ್ರದುರ್ಗ: ಉಕ್ರೇನ್ ಮತ್ತು ರಷ್ಯಾದ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಮಾನವ ಕುಲನಾಶವಾಗುವ ಭೀತಿ ಎದುರಾಗಿದೆ ಎಂದು ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಹೇಳಿದರು.

ನಗರದದ ಡಿ.ಸಿ.ಸರ್ಕಲ್, ಒನಕೆ ಓಬವ್ವ ಪ್ರತಿಮೆ ಬಳಿ ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಹಾಗೂ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗತ್ತಿನ ಶಾಂತಿ & ಸೌಹಾರ್ದತೆಗಾಗಿ ಜನರ ಹೋರಾಟದ ಭಾಗವಾಗಿ ಮೊಂಬತ್ತಿ ಹಚ್ಚಿ ಮಾತಾಡಿದ ಅವರು, ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ಕ್ಷಿಪಣಿ ದಾಳಿಯಿಂದಾಗಿ ಹತ್ಯೆಗೊಳಗಾಗಿದ್ದು, ಮಾನವ ಯುದ್ಧ ಭೀತಿಯಿಂದ ನರಳುವ ಪರಿಸ್ಥಿತಿ ಉಂಟಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಂತಹ ಎರಡನೇ ಮಹಾಯುದ್ಧವೂ ಸಾವು-ನೋವುಗಳನ್ನು ಹೆಚ್ಚುಮಾಡಿದ್ದು ಅಷ್ಟೇ ಅಲ್ಲದೇ, ಇಂದಿಗೂ ಸಹ ಹಿರೋಷಿಮಾ, ನಾಗಾಸಾಕಿ ನಗರದ ಜನರು ಕುರುಡ, ಕುಂಟತನದಂತಹ ಅಂಗವೈಕಲ್ಯದಿಂದಾಗಿ ನರಳುವಂತಾಗಿದೆ. ಆದ್ದರಿಂದ ಉಕ್ರೇನ್ ಮತ್ತು ರಷ್ಯಾದ ನಡುವಿನ ಯುದ್ಧವೂ ಮಾನವ ಕುಲಕ್ಕೆ ಗಂಡಾಂತರಕಾರಿಯಾಗಿದೆ. ಜಗತ್ತಿನ ಶಾಂತಿ ಪ್ರಿಯ ರಾಷ್ಟ್ರಗಳು ಶಾಂತಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಟಿಪು ಮಹಾ ವೇದಿಕೆ ಅಧ್ಯಕ್ಷ ಟಿಪ್ಪು ಖಾಸಿಂ ಅಲಿ ಮಾತನಾಡಿ, ಉಕ್ರೇನ್ ನಲ್ಲಿ ವಿದ್ಯಾಭ್ಯಾಸಕ್ಕೆ ಹೋದ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದರೆ ತೃತೀಯ ಜಗತ್ತು ಸುಮ್ಮನೆ ಕೂರುವ ಹಾಗಿಲ್ಲ ಎಂದರು.

ಜಿಲ್ಲಾ ಪರಿಶಿಷ್ಟ ಜಾತಿ, ವರ್ಗದವರ ಮೇಲೆ ನಡೆಯುವ ದೌರ್ಜನ್ಯ ತಡೆ ಕಾಯ್ದೆ ಸಮಿತಿ ಸದಸ್ಯ ರಾಜಪ್ಪ ಜೆಜೆಹಟ್ಟಿ ಮಾತನಾಡಿ, ಯುದ್ಧವು ಮನುಷ್ಯರಲ್ಲಿ ಆತಂಕ ಉಂಟು ಮಾಡುತ್ತದೆ. ಆದ್ದರಿಂದ ಯುದ್ಧ ನಿಲ್ಲಬೇಕು ಹಾಗೆಯೇ ಭಾರತದಲ್ಲಿಯೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡುವ ಅಗತ್ಯವಿದೆ ಎಂದರು.

ಜಗತ್ತಿನ ಶಾಂತಿಗಾಗಿ ನಡೆದ ಮೇಣದ ಬತ್ತಿ ಬೆಳಗುವ ಕಾರ್ಯಕ್ರಮದಲ್ಲಿ ಅಫಾನ್ ಅಲಿ, ಸಾದತ್, ಜಾಕೀರ್ ಹುಸೇನ್, ಕಾರ್ಯಕ್ರಮ ಸಂಯೋಕ ಮಹಮದ್ ಹನೀಫ್ ಕೋಟೆ, ಯುವ ವಕೀಲ ಅಶೋಕ ಬೆಳಗಟ್ಟ ಮಾತನಾಡಿದರು.

ಹಿರಿಯ ಪತ್ರಕರ್ತರಾದ ಹೆಚ್.ಲಕ್ಷ್ಮಣ್, ಗಿರೀಶ್, ದಲಿತ ಸಂಘರ್ಷ ಸಮಿತಿಯ ಮುಖಂಡ ರಾಜಣ್ಣ ಮುಂತಾದವರು ಹಾಜರಿದ್ದರು

Leave a Reply