ಚಿತ್ರದುರ್ಗ: ಬಡವರು, ನಿರ್ಗತಿಕರು, ಶೋಷಿತರನ್ನು ಗುರುತಿಸಿ ಸಂಕಷ್ಟದ ಕಾಲದಲ್ಲಿ ನೆರವು ನೀಡುವ ಕೆಲಸ ಮಾಡಿರುವ ನೂತನ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಅವರ ಕಾರ್ಯ ಶ್ಲಾಘನೀಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರವಿಶಂಕರ್ ರೆಡ್ಡಿ ಹೇಳಿದರು.
ಚಿತ್ರದುರ್ಗ ತಾಲ್ಲೂಕು ಸಿದ್ದಾಪುರ ನೂತನ ಸಂಸ್ಥೆ ವತಿಯಿಂದ ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಮನೆ ಕೆಲಸ ಮಾಡುವಂತಹ ಮಹಿಳೆಯರು, ಕೂಲಿ ಕೆಲಸ ಮಾಡುವವರು, ಅಲೆಮಾರಿ ಬುಡ್ಗ ಜಂಗಮ, ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಯಿತು.
ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಕಾಲದಲ್ಲೂ ಬಡವರಿಗೆ ಸಹಾಯ ಹಸ್ತ ಚಾಚುವ ಕೆಲಸವು ಪುಣ್ಯದ ಕೆಲಸವಾಗಿದೆ. ಕಷ್ಟದ ಕಾಲದಲ್ಲಿ ಪುಣ್ಯದ ಕೆಲಸ ಮಾಡುತ್ತಿರುವಂತ ರಘು ಅವರನ್ಮು ಸದಾ ಸ್ಮರಿಸಬೇಕು ಎಂದರು.
ನೂತನ ಸಂಸ್ಥೆಯ ಅಧ್ಯಕ್ಷ ರಘು(ರಾಘವೇಂದ್ರ ) ಮಾತನಾಡಿ, ನೂತನ NGO ವತಿಯಿಂದ ಈಗಾಗಲೇ ಸಾವಿರಾರು ಕುಟುಂಬಗಳಿಗೆ ಆಹಾರ, ರೇಷನ್ ಕಿಟ್ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಕಷ್ಟದಲ್ಲಿರುವ ಮಾಹಿತಿ ಲಭ್ಯವಾದರೆ ಅಂತಹವರಿಗೂ ಸಹಾಯ ಮಾಡಲಾಗುತ್ತದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಬಡವರು, ಅಸಹಾಯಕರು ಸಂಕಷ್ಟದಲ್ಲಿದ್ದಾಗ ನೆರವು ನೀಡುವಂತವರು ಮಾನವೀಯತೆಯನ್ನು ಮೆರೆಯುವ ಕೈಂಕರ್ಯವನ್ನು ನೂತನ NGO ಅಧ್ಯಕ್ಷ ರಾಘವೇಂದ್ರ ಮಾಡಿದ್ದಾರೆ. ಆಕಾರಣಕ್ಕಾಗಿ ಅವರು ಸಮಾಜದಲ್ಲಿ ಅತಿ ಹೆಚ್ಚು ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದಾರೆ ಎಂದರು.
ರೇಷನ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್, ಪರಿವರ್ತನಾ ಫೌಂಡೇಶನ್ ಅಧ್ಯಕ್ಷ ಕಾರ್ತಿಕ್, ಕರ್ನಾಟಕ ಗೃಹ ಅಸಂಘಟಿತ ಕಾರ್ಮಿಕರ ಸಂಘಟನೆ ನಾಯಕರಾದ ಗಂಗಮ್ಮ, ಶಾರದಮ್ಮ ಮುಂತಾದವರು ಹಾಜರಿದ್ದರು.



