ಚಿತ್ರದುರ್ಗ: ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ, ಪ್ರತಿರೋಧ ಇಂದು ಅತ್ಯಂತ ಅಗತ್ಯ ಎಂದು ಚಿಂತಕ ಸಿದ್ಧನಗೌಡ ಪಾಟೀಲ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪ್ರಸಕ್ತ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ದಾಳಿಗಳು ಮತ್ತು ಪ್ರತಿರೋಧ ವಿಷಯದ ಕುರಿತು ಮಾತಾಡಿದ ಅವರು, ಮಾನವ ಬಂಧುತ್ವ ವೇದಿಕೆ ಇಂದು ಚಳುವಳಿಯಾಗಿ ಬೆಳೆದಿದೆ. ಇದಕ್ಕೆ ಕಾರಣ ಸತೀಶ್ ಜಾರಕಿಹೊಳಿಯವರು. ಅವರು ಕೇವಲ ಚಟುವಟಿಕೆಗೆ ಸೀಮಿತವಾಗದೆ ಸಾಮಾಜಿಕ ಚಳುವಳಿಯಾಗಿ ಬೆಳೆಯಬೇಕು ಎಂಬ ಕಾರಣದಿಂದ ಇದನ್ನು ನಡೆಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿರುವ ರಾಜಕಾರಣಿಗಳು ತಮ್ಮ ಮತಕ್ಷೇತ್ರದಲ್ಲಿ ಮಾಡಿದರೆ ಕೋಮುವಾದಿಗಳು ಒಂದೇ ದಿನ ಇರಲು ಸಾಧ್ಯವಿಲ್ಲ ಎಂದರು.
ರಾಹುಲ್ ಗಾಂಧಿ ಹುಬ್ಬಳ್ಳಿಯಲ್ಲಿ ಸಂವಾದ ನಡೆಸಿದಾಗ, ಬಹುತೇಕ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ರಾಜಕೀಯವಾಗಿ ಕಾಂಗ್ರೆಸ್ ನಲ್ಲಿದ್ದಾರೆ. ತಾತ್ವಿಕವಾಗಿ, ಸಾಂಸ್ಕೃತಿಕವಾಗಿ ಆರ್.ಎಸ್.ಎಸ್.ನಲ್ಲಿದ್ದಾರೆ ಎಂದು ಹೇಳಿದೆ.
ರಾಜ್ಯದ ನಾಯಕರು ಬಂಧುತ್ವ ವೇದಿಕೆಯ ಹೆಸರಿನಲ್ಲಿ ಅಥವಾ ಬೇರೆ ವೇದಿಕೆಗಳ ಮೂಲಕ ಇಂದು ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಬೇಕು. ಬುದ್ಧ, ಬಸವ, ಅಂಬೇಡ್ಕರ್ ವಿಚಾರಗಳನ್ನು ಆಧರಿಸಿ ಅವರು ಇಂತಹ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಒಳಗೊಂಡು ನಡೆಸುತ್ತಿರುವ ಇಂತಹ ಚಳುವಳಿಗಳು ಅಗತ್ಯವಾಗಿದೆ ಎಂದರು.
ಕೆಲ ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಒನಕೆ ಓಬವ್ವ ಜಯಂತಿ ನಡೆಯಿತು. ಓಬವ್ವ, ಮದಕರಿ ನಾಯಕ, ಕನಕದಾಸ ಹಿಂದುಳಿದ ವರ್ಗದ ನಾಯಕರು. ಸಂಪೂರ್ಣ ರಾಮಾಯಣ ಎಂಬ ಕೃತಿಯಲ್ಲಿ ನಾರಾಯಣಾಚಾರ್ಯರು, ರಾಮಾಯಣವನ್ನು ಬರೆದದ್ದು ವಾಲ್ಮೀಕಿಯಲ್ಲ ಎನ್ನುತ್ತಾರೆ. ರಾಮಾಯಣ ಬರೆದದ್ದು ವಾಲ್ಮೀಕಿಯಲ್ಲ ಎನ್ನುವ ಮೂಲಕ ಬ್ರಾಹ್ಮಣ ಬರೆದ ಎಂದು ಸಾಧಿಸಲು ಯತ್ನಿಸುತ್ತಿದ್ದಾರೆ. ಸಂವಿಧಾನವನ್ನು ಕೂಡ ಅಂಬೇಡ್ಕರ್ ಬರೆದಿಲ್ಲ ಎಂದು ನಂಬಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ದಲಿತ, ಶೂದ್ರರನ್ನು ಹಿನ್ನೆಲೆಗೆ ಸರಿಸುವುದು ಸಾಂಸ್ಕೃತಿಕ ದಾಳಿ. ಅವರು ಹೇಳುತ್ತಿರುವುದೇನು ಎಂದು ಅರ್ಥಮಾಡಿಕೊಳ್ಳಬೇಕು. ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ ಈ ದೇಶದ ರಾಷ್ಟ್ರ ಭಾಷೆ ಸಂಸ್ಕೃತವಾಗಬೇಕು. ಅಲ್ಲಿಯವರೆಗೆ ಹಿಂದಿ ಇರಲಿ ಎಂದಿದ್ದಾರೆ. ನಾವು ತ್ರಿವರ್ಣ ಧ್ವಜವನ್ನು ಒಪ್ಪುದಿಲ್ಲ ಎನ್ನುತ್ತಾರೆ. ಅಂಬೇಡ್ಕರ್ ಅವರು ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮ, ರಾಜ್ಯಗಳ ಜನ ಒಟ್ಟಿಗೆ ಬದುಕಬೇಕು ಎಂದರೆ, ಇವರು ಒಂದು ರಾಷ್ಟ್ರ, ಪ್ರಭುತ್ವ ಎಂದು ಹೇಳುತ್ತಾರೆ. ಇವರು ಬಹುಭಾಷೆ, ಬಹುತ್ವ, ರಾಜ್ಯಗಳ ವಿರೋಧಿ. ಇದನ್ನು ನಾವು ಅರ್ಥಮಾಡಿಕೊಂಡರೆ ಅವರ ಹುನ್ನಾರಗಳ ಅರಿವಾಗುತ್ತದೆ ಎಂದರು.
ದೇಶದಲ್ಲಿ 45 ಕೋಟಿ ಅಸಂಘಟಿತ ವಲಯದವರಿದ್ದಾರೆ. 30 ಕೋಟಿ ಜನ 1.5 ಎಕರೆ ಜಮೀನು ಉಳ್ಳುವರು ಇದ್ದಾರೆ. ಸುಮಾರು 5 ಕೋಟಿ ಜನ ಬೀದಿ ವ್ಯಾಪಾರಸ್ತರಿದ್ದಾರೆ. 90 ಕೋಟಿ ಜನ ತಳವರ್ಗದವರಿದ್ದಾರೆ. ಅವರನ್ನು ಸಾಂಸ್ಕೃತಿಕವಾಗಿ ಗುಲಾಮರನ್ನಾಗಿಸಲಾಗಿದೆ ಎಂದರು.
ಮೋದಿಯವರು ಒಂದು ಬೆಕ್ಕು ಸಾಕಿದ್ದರು. ಅಂಬಾನಿ, ಅದಾನಿಯಂತಹ ಬಲಿಷ್ಠ ಬೆಕ್ಕುಗಳು ಅವರು. ಇವುಗಳ ಜೊತೆ ಬೇರೆ ಬೆಕ್ಕುಗಳನ್ನು ಖುಸ್ತಿಗಿಳಿಸಬೇಕು ಎಂದು ಮೋದಿ ಯೋಜಿಸುತ್ತಾರೆ. ಎಲ್ಲ ಬೆಕ್ಕುಗಳು ಹೋಗುತ್ತವೆ. ಮೋದಿಯವರ ಬೆಕ್ಕು ಒಂದೇ ಹೊಡೆತದಲ್ಲಿ ಉಳಿದವರ ಬೆಕ್ಕುಗಳನ್ನು ಹೊಡೆದುರುಳಿಸುತ್ತದೆ. ಮಾಧ್ಯಮಗಳು ಮೋದಿಯವರ ಬೆಕ್ಕನ್ನು ಹೊಗಳುತ್ತವೆ. ಆಗ ಮೊಳಕಾಲ್ಮೂರು ರೈತನೊಬ್ಬ ನನ್ನ ಬೆಕ್ಕಿಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸುತ್ತಾರೆ. ಆಗ ಮೋದಿ ಅವಕಾಶ ಕೊಡುತ್ತಾರೆ. ಆಗ ರೈತನ ಬೆಕ್ಕು ಮೋದಿ ಬೆಕ್ಕನ್ನು ಒಂದೇ ಏಟಿಗೆ ಹೊಡೆದುರುಳಿಸಿತು. ಅವನಿಗೆ ಅವಾರ್ಡ್ ಬಂತು. ಅವನ ಬೆಕ್ಕಿನ ವಿಶೇಷವೇನು ಎಂದು ಕೇಳಿದರು. ಅವನು ಮೊಳಕಾಲ್ಮೂರು ಹುಲಿ. ಬರಗಾಲದಿಂದ ಹೀಗಾಗಿದೆ ಎಂದ. ಕಿವಿಯಲ್ಲಿ ನೀನು ಬೆಕ್ಕಲ್ಲ ಹುಲಿ, ಹೋಗಿ ಬೆಕ್ಕನ್ನು ಹೊಡಿ ಎಂದೆ ಅದು ಹೊಡೆಯಿತು ಎಂದ. ಅದರಂತೆಯೇ ನಾವೆಲ್ಲ ಹುಲಿಗಳು ಬೆಕ್ಕುಗಳಾಗಿದ್ದೇವೆ. ಇಂತಹ ಹುಲಿಗಳಿಗೆ ವಿಷಯವನ್ನು ತಿಳಿಸುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಮಾಡುತ್ತಿದೆ ಎಂದರು.
ಜಾಗತಿಕ ಸಾಂಸ್ಕೃತಿಕ ದಾಳಿ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿಸಲಾಗುತ್ತಿದೆ. ಭಾರತರತ್ನ ಸಚಿನ್ ತೆಂಡುಲ್ಕರ್ ಸಿಕ್ಸ್ ಹೊಡೆದರೆ ಜಾಹೀರಾತಿನಲ್ಲಿ ಹುಡುಗಿ ಬಂದು ಶಕ್ತಿ ಎಲ್ಲಿಂದ ಬಂತು ಎನ್ನುತ್ತದೆ. ಭಾರತರತ್ನ ಬೂಸ್ಟ್ ಕುಡಿದಿದ್ದರಿಂದ ಶಕ್ತಿ ಬಂತು ಎನ್ನುತ್ತದೆ. ಇವರು ಯಾವತ್ತಾದರು ಎಳನೀರು, ಹುರುಳಿ ಗಂಜಿ ಕುಡಿಯಿರಿ ಎಂದಿಲ್ಲ. ಜಾಗತಿಕ ಆರ್ಥಿಕ ಗುಲಾಮಗಿರಿಯನ್ನು ಈ ರೀತಿ ತರುತ್ತಿದ್ದಾರೆ ಎಂದರು.
ನಮ್ಮ ದೇಶದ ಸಾರ್ವಜನಿಕ ವಲಯದ ಆಸ್ತಿಯನ್ನು ಮಾರಾಟ ಮಾಡಿ 6 ಲಕ್ಷ ಕೋಟಿಯನ್ನು ಗಳಿಸುತ್ತೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಎಲ್ಲವನ್ನೂ ಅವರು ಮಾರುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಸ್ವಾತಂತ್ರ್ಯ ಬಂದ 10 ವರ್ಷಗಳ ನಂತರ ಕೈಗಾರಿಕೆಗಳು, ಜಮೀನು ರಾಷ್ಟ್ರೀಕರಣ ಮಾಡಬೇಕು ಎಂದಿದ್ದರು. ಇಂದು ಕೇಂದ್ರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಎಲ್ಲವೂ ಖಾಸಗೀಕರಣಗೊಂಡ ನಂತರ ನೀವು ಮೀಸಲಾತಿಯನ್ನು ಎಲ್ಲಿ ಕೇಳುತ್ತೀರಿ. ಗೋಮಾಳಗಳನ್ನು ಹಂಚಲು ಸಮಿತಿಯನ್ನು ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಈಗಾಗಲೇ ಸಾರ್ವಜನಿಕ ಆಸ್ತಿಯ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಕೇಳಿದ್ದಾರೆ. ಆಸ್ತಿ ನಗದೀಕರಣ ಎಂದರೆ ಅಪ್ಪ ಮಾಡಿದ ಆಸ್ತಿಯನ್ನು ಮಗ ಮಾರಾಟ ಮಾಡುವುದು. ಅಂಬೇಡ್ಕರ್ ವಿಕೇಂದ್ರೀಕರಣ ಆಗಬೇಕು ಎಂದಿದ್ದರು. ಆದರೆ, ಇಂದು ಎಲ್ಲವೂ ಅಂಬಾನಿ, ಅದಾನಿ ಒಡೆತನಕ್ಕೆ ಹೋಗುತ್ತಿದೆ. ಬಿಎಸ್.ಎನ್.ಎಲ್ ಮುಚ್ಚಲು ಜಿಯೋ ಬರಬೇಕು. ಜಿಯೋದಲ್ಲಿ ಮೀಸಲಾತಿ ಇಲ್ಲ ಎಂದರು.
ಹಿಂದುತ್ವ ಹೆಸರಿನಲ್ಲಿ ಹಿಂದುಳಿದವರು, ದಲಿತರು ಆರ್.ಎಸ್.ಎಸ್. ನಾಯಕರಾಗುವುದಿಲ್ಲ. ಇವರು ಬಜರಂಗದಳಕ್ಕೆ ಹೋಗುತ್ತಾರೆ. ಜೈಲಿಗೆ ಹೋಗುವವರು ಬಜರಂಗದಳದವರು. ಅಧಿಕಾರಕ್ಕೆ ಹೋಗುವವರು ಅವರು. ಲೀಡರ್ ಗಳು ವಿಧಾನಸೌಧ, ಸಂಸತ್ತಿಗೆ ಹೋಗುತ್ತಾರೆ. ಇವರು ಜೈಲಿಗೆ ಹೋಗುತ್ತಾರೆ. ಇದನ್ನು ಜನರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಕೋಮುವಾದ, ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವುದು ರಾಜಕೀಯ, ಸಾಮಾಜಿಕ ಚಳುವಳಿ ಹೌದು. ಮಾನವ ಬಂಧುತ್ವ ವೇದಿಕೆ ಜನಪರ ರಾಜಕಾರಣಕ್ಕೆ ಕಾರಾಣವಾಗಲಿ ಎಂದು ಆಶಿಸಿದರು.



