ಸಂಸ್ಕೃತಿ ಮತ್ತು ಕ್ರೀಡೆಗಳು ಮಕ್ಕಳ ಕ್ರಿಯಾಶೀಲತೆಗೆ ಪೂರಕ

4 years ago

ಚಾಮರಾಜನಗರ: ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳು ಮಕ್ಕಳನ್ನು ಮಾನಸಿಕವಾಗಿ ಕ್ರಿಯಾಶೀಲಗೊಳಿಸುತ್ತವೆ. ಮಕ್ಕಳಲ್ಲಿರುವ ಕಲೆಯನ್ನು ಹೊರತರಲು ಚಿಗುರು ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಭಾಗವಹಿಸುವಂತೆ ಪ್ರೇರೇಪಿಸಿ, ಪ್ರೋತ್ಸಾಹಿಸಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಅನೇಕರು ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಅನೇಕ ವಿಜ್ಞಾನಿಗಳು ಸಹ ಸರ್ಕಾರಿ ಶಾಲೆಯಲ್ಲಿ ಓದಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ಶಿಸ್ತು, ಓದು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಮಕ್ಕಳ ಬುದ್ದಿಶಕ್ತಿ ಹೆಚ್ಚಳಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಮಕ್ಕಳಲ್ಲಿ ಸುಪ್ತವಾಗಿರುವ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು ಎಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿರುವ ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ಚಿಗುರು ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷ ಶಂಕರನಾಯಕ, ಸದಸ್ಯರಾದ ಸುರೇಶ್, ರವಿಕುಮಾರ್, ಪ್ರಾಂಶುಪಾಲ ಚಿನ್ನರಾಜು, ಮುಖ್ಯ ಶಿಕ್ಷಕರಾದ ನಾಗರತ್ನಮ್ಮ, ತ್ಯಾಗರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಿಕಿ ಅನಿತಾ, ಗಾಯಕ ಜೆ.ಬಿ.ಮಹೇಶ ಸೇರಿದಂತೆ ಇತರರು ಭಾಗವಹಿಸಿದ್ದರು.

ಸಮಾರಂಭದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಧೃತಿ ಮತ್ತು ಲಾಸ್ಯ ಅವರಿಂದ ವಾದ್ಯ ಸಂಗೀತ, ಯಳಂದೂರಿನ ಎಂ. ಸುಮಿತ್ ಅವರಿಂದ ಸುಗಮ ಸಂಗೀತ, ಚಾಮರಾಜನಗರದ ರೋಹಿತ್ ರಾಜ್ ಅವರಿಂದ ಜನಪದ ಗೀತೆ, ಗುಂಡ್ಲುಪೇಟೆಯ ಉನ್ನತಿ ಮತ್ತು ತಂಡ ನಡೆಸಿಕೊಟ್ಟ ಭರತ ನಾಟ್ಯ, ಚಾಮರಾಜನಗರದ ಪೂರ್ವಿ ಮತ್ತು ತಂಡ ನಡೆಸಿಕೊಟ್ಟ ಶಾಸ್ತ್ರೀಯ ನೃತ್ಯ, ಅದ್ವೈತ್ ಎಸ್. ನಾಯಕ್ ಮತ್ತು ತಂಡ ನಡೆಸಿಕೊಟ್ಟ ಒಗಟಿನ ರಾಣಿ ಮಕ್ಕಳ ನಾಟಕ ಜನಮನ ಸೆಳೆಯಿತು.

Leave a Reply