ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ 3,522 ಕೋಟಿ ರೂ ಅಕ್ರಮ

3 months ago

ಬೆಂಗಳೂರು: ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಸಾವಿರಾರು ಕೋಟಿ ರೂ ಅಕ್ರಮ ಹಣ ವರ್ಗಾವಣೆ ಸಂಬಂಧ‌ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ವಿಂಜೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಅದರ ನಿರ್ದೇರ್ಶಕರಾದ ಪವನ್ ನಂದಾ, ಸೌಮ್ಯ ಸಿಂಗ್‌ ರಾಥೋಡ್, ವಿಂಜೋದ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್‌, ವಿಂಜೋ ಎಸ್‌ಜಿ ಪ್ರೈವೇಟ್‌ ಲಿಮಿಟೆಡ್​, ಜೋ ಪ್ರೈವೇಟ್‌ ಲಿಮಿಟೆಡ್​​ ಕಂಪನಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಸುಮಾರು 3,522 ಕೋಟಿ ರೂ ಅಕ್ರಮ ನಡೆದಿರುವುದು ಇ.ಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ವಿಂಜೋ ಆನ್‌ಲೈನ್‌ ಗೇಮಿಂಗ್‌ನ ವಂಚನೆಯ ವಿರುದ್ಧ ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ, ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮಗಳಲ್ಲಿ ಎಫ್‌ಐಆರ್‌ ದಾಖಲಾಗಿದ್ದವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ, ಇ.ಡಿ ಸಹ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ಬಳಿಕ ಇತ್ತೀಚಿಗೆ ವಿಂಜೋ ಕಂಪನಿಯ ಕಚೇರಿ, ಕಂಪನಿಯ ನಿರ್ದೇಶಕರ ನಿವಾಸಗಳು, ಸಂಬಂಧಿಸಿದ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ವಂಚನೆಗೆ ಸಂಬಂಧಿಸಿದ ಹಲವು ದಾಖಲೆಗಳು, ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್ ಗೇಟ್‌ವೇ ಬ್ಯಾಲೆನ್ಸ್‌ಗಳು, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಫಿಕ್ಸೆಡ್ ಡೆಪಾಸಿಟ್, ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು ಸೇರಿದಂತೆ ಸುಮಾರು 690 ಕೋಟಿ ಮೌಲ್ಯದ ಚರಾಸ್ತಿಗಳನ್ನು ಇ.ಡಿ ಫ್ರೀಜ್‌ ಮಾಡಿತ್ತು.

ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ (ಆರ್‌ಎಂಜಿ) ವ್ಯವಹಾರ ನಡೆಸುತ್ತಿದ್ದ ವಿಂಜೋ, ಸುಮಾರು 25 ಕೋಟಿ ಬಳಕೆದಾರರನ್ನು ಹೊಂದಿತ್ತು. 100ಕ್ಕೂ ಹೆಚ್ಚು ಆಟಗಳನ್ನು ನೀಡಿ ಬಳಕೆದಾರರ ಬೆಟ್ಟಿಂಗ್ ಮೊತ್ತದ ನಿರ್ದಿಷ್ಟ ಹಣವನ್ನು ಕಮಿಷನ್ ರೂಪದಲ್ಲಿ ಪಡೆಯುತ್ತಿತ್ತು. ಆನ್‌ಲೈನ್‌ ಗೇಮ್‌ಗಳು ಸುರಕ್ಷಿತ ಹಾಗೂ ಪಾರದರ್ಶಕ ಎಂದು ಹೇಳಿತ್ತಾದರೂ ನಂತರ ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರೂ. ವಂಚಿಸಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರಂಭದಲ್ಲಿ ಬಳಕೆದಾರರಿಗೆ ಸಣ್ಣ ಬೋನಸ್‌ಗಳ ಆಮಿಷವೊಡ್ಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಗೆದ್ದಾಗ ಬಂದ ಹಣವನ್ನು ವಾಪಸ್‌ ಪಡೆಯಲು ಅವಕಾಶವನ್ನೂ ಕಲ್ಪಿಸಲಾಗಿತ್ತು. ಬಳಕೆದಾರರು ಹೆಚ್ಚಿನ ಮೊತ್ತದೊಂದಿಗೆ ಗೇಮ್‌ಗಳನ್ನು ಆಡಲು ಪ್ರಾರಂಭಿಸಿದಾಗ ತಂತ್ರಜ್ಞಾನದ ಮುಖಾಂತರ ಸೋಲಿಸಿ ಆರ್ಥಿಕ ನಷ್ಟ ಉಂಟಾಗುವಂತೆ ಮಾಡಲಾಗುತ್ತಿತ್ತು.

ಬಳಕೆದಾರರನ್ನು ಅಕ್ರಮವಾಗಿ ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರೂ. ನಷ್ಟ ಉಂಟಾಗುವಂತೆ ಮಾಡಿತ್ತು. ಬಳಕೆದಾರರು ಗೆದ್ದ ಹಣವನ್ನು ಹಿಂಪಡೆಯಲು ನಿರ್ಬಂಧಿಸಿ, ನಂತರ ನಿರಂತರ ಆಟ ಮುಂದುವರೆಸುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ ಸರ್ಕಾರ ಈ ರೀತಿಯ ರಿಯಲ್‌ ಮನಿ ಗೇಮ್ಸ್ ನಿಷೇಧಿಸಿದ ನಂತರವೂ ಬಳಕೆದಾರರ 47.66 ಕೋಟಿ ರೂ. ಠೇವಣಿ ಹಿಂದಿರುಗಿಸಲು ವಿಂಜೋ ವಿಫಲವಾಗಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಸುಮಾರು 3,522.05 ಕೋಟಿ ರೂಪಾಯಿ ಹಣವನ್ನು ವಂಚನೆಯಿಂದ ಗಳಿಸಿರುವುದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಗಳಿಸಿದ ಆದಾಯವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್‌ ಕಂಪನಿಗಳಿಗೆ ಅಕ್ರಮವಾಗಿ ವರ್ಗಾಯಿಸಿದೆ.

ಈ ಶೆಲ್‌ ಕಂಪನಿಗಳ ಹೆಸರಿನಲ್ಲಿ ಹೊಂದಿರುವ ವಿದೇಶಿ ಬ್ಯಾಂಕ್‌ ಖಾತೆಗಳಿಗೆ ಸುಮಾರು 55 ಮಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ವರ್ಗಾಯಿಸಿರುವುದು ಬಯಲಾಗಿದೆ ಎಂದು ಇ.ಡಿ ವಿವರಿಸಿದೆ.

Leave a Reply