ತಹಶೀಲ್ದಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು: ಕೃಷ್ಣ ಬೈರೇಗೌಡ

3 years ago

Criminal, case, filed, against, Tehsildar, KrishnaByregowda

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಬೀರೂರು ಹೋಬಳಿಯ ಎಮ್ಮೆದೊಡ್ಡಿ ಕಾವಲು ಗ್ರಾಮದ ಸರ್ವೇ ನಂ.70, 71 ಹಾಗೂ ಇತರೆ ಸರ್ವೇ ನಂಬರ್ ಗೆ ಸೇರಿದ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದ ತಹಶೀಲ್ದಾರ್ ಜೆ ಉಮೇಶ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದ್ದು, ಭ್ರಷ್ಟ ಅಧಿಕಾರಿಯನ್ನು ಬಂಧಿಸಲಾಗಿದೆ. ಅಲ್ಲದೆ ಅಕ್ರಮದಲ್ಲಿ ಪಾಲ್ಗೊಂಡ ಇತರೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಎಮ್ಮೆದೊಡ್ಡಿ ಕಾವಲು ಗ್ರಾಮದ ಸ.ನಂ.70, 71, 12, 13, 14, 77, 84 ಮತ್ತು 1 ರಿಂದ 63ರವರೆಗಿನ 21 ಸಾವಿರ ಎಕರೆ ಜಾಗವನ್ನು Notification No:A.F.3892-Ft-137-41-2, Dt:04.02.1942 ರಂತೆ ಮೈಸೂರು ಗೇಮ್ ಅಂಡ್ ಫಿಷ್ ಪ್ರಿಸರ್ವೇಶನ್ ಕಾಯ್ದೆ Il of 1901 ರ ಕಲಂ-4(ಬಿ) ಅಡಿಯಲ್ಲಿ ಸರ್ಕಾರಿ ಆದೇಶದಂತೆ ಮೈಸೂರು ಒಡೆಯರ್ ಕಾಲದಲ್ಲೇ “ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶ” ವೆಂದು ಅಧಿಸೂಚಿಸಲ್ಪಟ್ಟಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಸದರಿ ಪ್ರದೇಶ ಪ್ರಸ್ತುತ ಕರ್ನಾಟಕ ಅರಣ್ಯ ಕಾಯ್ದೆ-1963ರ ಕಲಂ-4ರಡಿಯೂ ಅಧಿಸೂಚಿತ ಪ್ರದೇಶವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಯಾವುದೇ ಅಭಿಪ್ರಾಯ ಪಡೆಯದೆ ಸಮೂನೆ-50/53 ರಡಿಯಲ್ಲಿ ಸಾಗುವಳಿ ಚೀಟಿ ನೀಡಿ.ಆರ್.ಟಿ.ಸಿ.ಗಳನ್ನು ನೀಡಲು ಕಾನೂನಿನ ಅಡಿಯಲ್ಲಿ ಅವಕಾಶ ಇರುವುದಿಲ್ಲ. ಒಂದು ವೇಳೆ ಹಾಗೆ ನೀಡಿದರೆ ಅರಣ್ಯ ಸಂರಕ್ಷಣಾ ಕಾಯ್ದೆ-1980ರ ಕಲಂ-2 ಮತ್ತು ಅರಣ್ಯ ಕಾಯ್ದೆ ಹಾಗೂ ಉನೂನಿನ್ವಯ ಉಲ್ಲಂಘನೆಯಾಗಿರುತ್ತದೆ. ಅಲ್ಲದೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದ್ದಾರೆ.

ಆದರೆ, ಪ್ರಸ್ತುತ ಕಾರವಾರದ ಸೀ ಬರ್ಡ್ ನೌಕಾನೆಲೆಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿರುವ ಕಡೂರಿನಲ್ಲಿ ಈ ಹಿಂದೆ ತಹಶೀಲ್ದಾರ್ ಆಗಿದ್ದ ಜೆ.ಉಮೇಶ್ ಎಂಬ ಅಧಿಕಾರಿ ಬೀರೂರು ಹೋಬಳಿಯ ಎಮ್ಮೆದೊಡ್ಡಿ ಗ್ರಾಮದ ಸ.ನಂ.77ರ ಪ್ರದೇಶವು ಸೆಕ್ಷನ್ 4ರಡಿ ಪ್ರಾಥಮಿಕ ಅಧಿಸೂಚನೆಯಾಗಿ ತದ ನಂತರ ’ಹುಲಿ ಸಂರಕ್ಷಿತ’ ಪ್ರದೇಶ ಎಂದು ಘೋಷಿತವಾಗಿದ್ದರೂ ಅರಣ್ಯ ಇಲಾಖೆಯ ಅಭಿಪ್ರಾಯ ಕೂಡ ಪಡೆಯದೆ ಕಾನೂನು ಬಾಹೀರವಾಗಿ 18 ಜನರಿಗೆ ಆ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದಿದ್ದಾರೆ.

‘ಹುಲಿ ಸಂರಕ್ಷಿತ’ ಪ್ರದೇಶ ಎಂಬ ವಿಷಯ ಗೊತ್ತಿದ್ದರೂ ಸಹ ವಾಸ್ತವಾಂಶ ಮರೆಮಾಚಿ ಸ್ಥಳ ಪರಿಶೀಲನೆ ಮಾಡಿದ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಕಡತದ ಮನವಿ ಪತ್ರಕ್ಕೆ ಮಂಜೂರಾತಿಗೆ ಶಿಫಾರಸು ಮಾಡಿದ್ದರು. ತಹಶೀಲ್ದಾರ್ ಜಿ.ಉಮೇಶ್ ಸಾಗುವಳಿ ಚೀಟಿಗೆ ಸಹಿ ಮಾಡಿ ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿದ್ದರು. ನಂತರ ಶಿರಸ್ತೇದಾರರು, ರಾಜಸ್ವ ನಿರೀಕ್ಷಕರು ಅನುಮೋದಿಸಿ ಖಾತೆ ಮಾಡಿದ್ದಾರೆ ಎಂದಿದ್ದಾರೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ವರದಿ ಸಲ್ಲಿಸಿದ್ದು, ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಹಕ್ಕು ದಾಖಲಿಸಿರುವ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬಗರ್ ಹುಕುಂ ಸಮಿತಿಯಲ್ಲಿ ನಮೂನೆ 50/53 ವಜಾಗೊಂಡಿದ್ದರೂ ಸಹ ಪುನಃ ನಕಲಿ ಸಾಗುವಳಿ ಚೀಟಿಯನ್ನು ಕಾನೂನು ಬಾಹಿರವಾಗಿ ಸೃಷ್ಟಿಸಿ ಮಂಜೂರು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು ಎಂದಿದ್ದಾರೆ.

ಚಿಕ್ಕಮಗಳೂರು ಜಿಲ್ಲಾಧಿಕಾರಿ ಅವರ ವರದಿಯನ್ನು ಗಂಬೀರವಾಗಿ ಪರಿಗಣಿಸಿದ್ದು, ಪ್ರಕರಣದ ನ್ಯಾಯಯುತ ತನಿಖೆಗೆ ನಡೆಸಿ , ತಪ್ಪಿಸ್ಥರಿಗೆ ಶಿಕ್ಷೆ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಈಗಾಗಲೇ 13 ಜನರ ತಹಶೀಲ್ದಾರರ ತಂಡ ಚಿಕ್ಕಮಗಳೂರಿನಲ್ಲಿ ಬೀಡುಬಿಟ್ಟಿದ್ದು, ಅಕ್ರಮವಾಗಿ ಖಾಸಗಿಯವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿರುವ ಅರಣ್ಯ ಭೂಮಿಯ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಇಂತಹ ಮತ್ತೂ 22 ಪ್ರಕರಣಗಳು ಪತ್ತೆಯಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಪೈಕಿ ಕೆಲವು ಕಡತಗಳಲ್ಲಿ ಕಚೇರಿ ಟಿಪ್ಪಣಿ , ಸರ್ವೆ ಸ್ಕೆಚ್ ಇರಲಿಲ್ಲ. ಸಭಾ ನಡಾವಳಿ ಕೂಡ ಪತ್ತೆಯಾಗಿಲ್ಲ. ಮನವಿ ಪತ್ರಗಳಲ್ಲಿ ತಹಶೀಲ್ದಾರ್, ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರ ಸಹಿ ಇಲ್ಲದಿದ್ದರೂ ಸಹ ಕೇವಲ ಸಾಗುವಳಿ ಚೀಟಿಯನ್ನು ಆಧರಿಸಿ ಮಂಜೂರು ಮಾಡಿರುವುದು ಕಂಡುಬಂದಿದೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಾಗುವಳಿ ಚೀಟಿ ಕೂಡ ನಕಲಿ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಪ್ರಕರಣದ ಸಂಬಂಧ ತಹಶೀಲ್ದಾರ್ ಉಮೇಶ್ ಜೆ ಎಂಬವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿ ಇದೀಗ ಬಂಧಿಸಲಾಗಿದೆ. ಅಲ್ಲದೆ, ಪ್ರಕರಣದಲ್ಲಿ ತಹಶೀಲ್ದಾರ್ ಜೆ. ಉಮೇಶ್ ಅವರಿಗೆ ಸಹಕರಿಸಿದ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರ ವಿರುದ್ಧವೂ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ಕಂದಾಯ ಇಲಾಖೆಯನ್ನು ಭ್ರಷ್ಟಾಚಾರ ಮುಕ್ತಗೊಳಿಸಿ ಜನಸ್ನೇಹಿ ಆಡಳಿತ ನೀಡುವ ಸರ್ಕಾರದ ಭರವಸೆಗೆ ನಾವು ಬದ್ಧರಾಗಿದ್ದೇವೆ. ಇಲಾಖೆಯಲ್ಲಿ ಯಾವುದೇ ಹಂತದಲ್ಲಿ ಯಾವುದೇ ವ್ಯಕ್ತಿಯ ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಈಗಾಗಲೇ ಕಂದಾಯ ಇಲಾಖೆಯಲ್ಲಿ ಅಕ್ರಮ ಎಸಗಿದ್ದ 66 ಜನ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಮೂಲಕ ಮಾದರಿ ಹೆಜ್ಜೆ ಇಡಲಾಗಿದೆ. ಅಲ್ಲದೆ ವಿಚಾರಣೆಯ ಹಂತದಲ್ಲಿರುವ ಇತರ ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ನೀಡುವಂತೆಯೂ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಪರಭಾರೆ ಮಾಡಿರುವ ಪ್ರಕರಣ ಗಂಭೀರ ಪ್ರಕರಣವಾಗಿದ್ದು, ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಅಲ್ಲದೆ, ಮತ್ತೆ ಇಂತಹ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Reply