ಬೆಂಗಳೂರು: ರಾಜಕೀಯ ಕಾರಣಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದು ಬಿಜೆಪಿಯ ಚಾಳಿಯಾಗಿದೆ. ಈ ಪಕ್ಷ ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್ ಗಿರಿ ಮಾಡುವುದು, ಅಧಿಕಾರದಲ್ಲಿ ಇಲ್ಲದಾಗ, ಆ ಪಕ್ಷದ ಕಾರ್ಯಕರ್ತರೇ ವೇಷ ಬದಲಿಸಿಕೊಂಡು ಕಿಡಿಗೇಡಿತನ ಪ್ರದರ್ಶಿಸುವುದು ಅವರ ಹುಟ್ಟುಗುಣವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರದಲ್ಲಿದ್ದಾಗ ನೈತಿಕ ಪೊಲೀಸ್‍ಗಿರಿ, ಸಾರ್ವಜನಿಕರ ಮೇಲೆ ಹಲ್ಲೆ ಮಾಡುವುದು, ಕೋಮುಗಲಭೆ ಮಾಡಿಸುವುದು ಅವರ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರದಲ್ಲಿ ಇಲ್ಲದಿದ್ದಾಗ ಕಿತಾಪತಿ ಮಾಡುವುದರಲ್ಲಿ ನಿಸ್ಸೀಮರು. ಸಮಾಜದ ನಡುವೆ ಜಗಳ ತಂದಿಟ್ಟು, ಸಂಘರ್ಷ ಸೃಷ್ಟಿಸುವುದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವುದು ಅವರ ಹುಟ್ಟುಗುಣವಾಗಿದೆ ಎಂದು ದೂರಿದರು.




