ಮಂಗಳೂರು: CPIM ಪಕ್ಷದ ಹಿರಿಯ ಸದಸ್ಯ, ಬಜಾಲ್ ಜಲ್ಲಿಗುಡ್ಡ ಪ್ರದೇಶದ ನಿವಾಸಿ ಮೋನಪ್ಪ ಬಂಗೇರರವರು (78) ದೀರ್ಘಕಾಲದ ಅನಾರೋಗ್ಯದಿಂದ ಬಜಾಲ್ ಜಲ್ಲಿಗುಡ್ಡದಲ್ಲಿರುವ ತಮ್ಮ ಸ್ವಗೃಹದಲ್ಲಿ ಕಾಲವಶರಾದರು. ಮೋನಪ್ಪ ಬಂಗೇರ ಅವರು ಪತ್ನಿ,ಇಬ್ಬರು ಹೆಣ್ಣು,ಮೂವರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾದ ಮೋನಪ್ಪ ಬಂಗೇರ ತಮ್ಮ ಯೌವನದಲ್ಲಿ ಹಂಚು ಕಾರ್ಮಿಕರಾಗಿ ಹಂಚು ಕಾರ್ಮಿಕರ ಅನೇಕ ಹೋರಾಟಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಸ್ಥಳೀಯ ಸಂಘ ಸಂಸ್ಥೆಗಳಾದ ಪಕ್ಕಲಡ್ಕ ಯುವಕ ಮಂಡಲ ಹಾಗೂ ಜನತಾ ವ್ಯಾಯಾಮ ಶಾಲೆಗಳಲ್ಲೂ ಕ್ರಿಯಾಶೀಲ ಪಾತ್ರವಹಿಸಿದ ಮೋನಪ್ಪರವರು, ಬಜಾಲ್ ಪ್ರದೇಶದ ದುಡಿಯುವ ವರ್ಗದ ಚಳುವಳಿಯ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಮೃದು ಸ್ವಭಾವದ ಸರಳ ಸಜ್ಜನಿಕೆಯ ಮೋನಪ್ಪ ಬಂಗೇರ ಪಕ್ಷದ ಬಗ್ಗೆ ಅಪಾರ ಗೌರವ ಹೊಂದಿದ್ದು, ತನ್ನ ಕೊನೆಯ ಉಸಿರಿನರೆಗೂ ಪಕ್ಷದ ಸದಸ್ಯರಾಗಿದ್ದು, ಅವರ ಅಗಲುವಿಕೆ ಬಜಾಲ್ ಗ್ರಾಮದ ಕಾರ್ಮಿಕ ವರ್ಗದ ಚಳುವಳಿಗೆ ತುಂಬಲಾರದ ನಷ್ಟ ಎಂದು CPIM ತನ್ನ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಅಂತ್ಯಕ್ರಿಯೆಯಲ್ಲಿ CPIM ದ.ಕ. ಜಿಲ್ಲಾ ನಾಯಕ ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, CPIM ಮಂಗಳೂರು ನಗರ ಮುಖಂಡ ಸುರೇಶ್ ಬಜಾಲ್, ಸ್ಥಳೀಯ CPIM ನಾಯಕ ಅಶೋಕ್ ಸಾಲ್ಯಾನ್, ದೀಪಕ್ ಬಜಾಲ್, ವರಪ್ರಸಾದ್, ಜಯಪ್ರಕಾಶ್, ಮೋಹನ್ ಜಲ್ಲಿಗುಡ್ಡ ಮುಂತಾದವರು ಹಾಜರಿದ್ದರು.




