ಬಸ್ ಮಾಲಕರ ಲಾಬಿಗೆ ಶರಣಾದ ಜಿಲ್ಲಾಡಳಿತ: ಸುನಿಲ್ ಕುಮಾರ್ ಬಜಾಲ್ ಆರೋಪ

5 years ago

ಮಂಗಳೂರು: ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ. ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗೀ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ CPIM ನೇತೃತ್ವದಲ್ಲಿ ಯೆಯ್ಯಾಡಿ ಜಂಕ್ಷನ್ ನಲ್ಲಿ ಜರುಗಿದ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿ ಅವರು,  ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು, ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು.

ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜನರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ನ್ಯಾಯಯುತವಾಗಿ ಪ್ರಯಾಣ ದರವನ್ನು ಪರಿಷ್ಕರಿಸಬೇಕಾಗಿದ್ದ ಜಿಲ್ಲಾಧಿಕಾರಿಗಳು ಏಕಪಕ್ಷೀಯ ನಿರ್ಧಾರ ಕೈಗೊಂಡು ಜಿಲ್ಲೆಯ ಜನತೆಗೆ ಮಹಾಮೋಸಗೈದಿದ್ದಾರೆ ಎಂದರು.

CITU ಜಿಲ್ಲಾ ನಾಯಕ ರವಿಚಂದ್ರ ಕೊಂಚಾಡಿ ಮಾತನಾಡಿ, ಬಸ್ ಪ್ರಯಾಣ ದರ ಏರಿಕೆಯಿಂದ ಕಂಗೆಟ್ಟ ಜಿಲ್ಲೆಯ ಜನತೆಯ ನೋವಿಗೆ ಸ್ಪಂದಿಸಬೇಕಾಗಿದ್ದ ಸಂಸದರು, ಶಾಸಕರು ಯಾವ ಗುಹೆಯಲ್ಲಿ ಅಡಗಿಕೊಂಡಿದ್ದಾರೆ. ಧರ್ಮ ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಜನತೆಯ ಸಂಕಷ್ಟ ಹಾಗೂ ಜಿಲ್ಲೆಯ ಅಭಿವೃದ್ದಿ ಬೇಕಾಗಿಲ್ಲ. ಅಂತಹವರನ್ನು ಆಯ್ಕೆ ಮಾಡುವ ಮೂಲಕ ಜನರ ಬದುಕು ನರಕಯಾತನೆಯಾಗಿದೆ ಎಂದರು.

DYFI ಮಂಗಳೂರು ನಗರಾಧ್ಯಕ್ಷ ನವೀನ್ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಸ್ ಪ್ರಯಾಣ ದರ ಏರಿಕೆ ವಿರುದ್ದ ಜಿಲ್ಲೆಯಲ್ಲಿ ನಡೆದ ಐತಿಹಾಸಿಕ ಯಶಸ್ವಿ ಹೋರಾಟವನ್ನು ಮೆಲುಕು ಹಾಕುತ್ತಾ, ಏರಿಸಿದ ದರವನ್ನು ಕೂಡಲೇ ತಡೆಹಿಡಿದು, ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿ, ದಲಿತ ಹಕ್ಕುಗಳ ಸಮಿತಿ ನಾಯಕ ತಿಮ್ಮಯ್ಯ ಕೊಂಚಾಡಿ, ಸ್ಥಳೀಯ CPIM ಮುಖಂಡರಾದ ದಯಾನಂದ ಕೊಪ್ಪಳಕಾಡು, ದಯಾನಂದ ಶೆಟ್ಟಿಗಾರ್, ಪದ್ಮನಾಭ ಕೊಂಚಾಡಿ, ನಾರಾಯಣ, ಪ್ರವೀಣ್, ಪಾಂಡುರಂಗ ಮುಂತಾದವರು ಭಾಗವಹಿಸಿದ್ದರು.

Leave a Reply