2023ರ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ

3 years ago

ಬೆಂಗಳೂರು: ದೇಶಾದ್ಯಂತ ರಾಜಕೀಯ ಪಂಡಿತರ ಕುತೂಹಲ ಕೆರಳಿಸಿರುವ ಈ ವರ್ಷದ ಅತಿದೊಡ್ಡ ಜನಾದೇಶ ಎಂದು ಹೇಳಲಾಗಿರುವ 2023ರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ.

ಮತಗಳ ಎಣಿಕೆಗಾಗಿ ಆಯೋಗ ಎಲ್ಲ ರೀತಿಯಲ್ಲೂ ಸಜ್ಜುಗೊಂಡಿದೆ. ಮತ ಎಣಿಕಾ ಕೇಂದ್ರದ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಕೈಗೊಂಡಿರುವ ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಕಲಂ 144ರ ಅನ್ವಯ ಪ್ರತಿಬಂಧಕ ಆಜ್ಞೆಯನ್ನು ವಿಧಿಸಿದ್ದಾರೆ.

ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ ಮಾಡಿದ್ದು, ಭದ್ರತಾ ಕಾರ್ಯಕ್ಕಾಗಿ ಅರೆಸೇನಾ ಪಡೆ ಮತ್ತು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಬಳಸಲಾಗಿದೆ.

ಕರುನಾಡಿನ ತೀರ್ಪಿಗಾಗಿ ದೇಶವೇ ಕಾತುರದಿಂದ ಎದುರು ನೋಡುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ, ಸಿಪಿಐಎಂ ಹಾಗೂ ಪಕ್ಷೇತರರು ಸೇರಿದಂತೆ 2,430 ಪುರುಷರು, 184 ಮಹಿಳೆಯರು, ಒಬ್ಬ ತೃತೀಯ ಲಿಂಗಿ ಸೇರಿ ಒಟ್ಟು 2615 ಅಭ್ಯರ್ಥಿಗಳ ಹಣೆಬರಹ ಬಹಿರಂಗಗೊಳ್ಳಲಿದೆ.

ಮೇ 10ರಂದು ಬೆಳಗ್ಗೆ 8 ಗಂಟೆಗೆ ರಾಜ್ಯಾದ್ಯಂತ ಏಕಕಾಲಕ್ಕೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ಮತ ಎಣಿಕೆ ಪ್ರಾರಂಭವಾಗಿ ಬಹುತೇಕ ಮಧ್ಯಾಹ್ನ 2 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಈ ಬಾರಿ ಸ್ವತಂತ್ರ ಸರ್ಕಾರವೋ ಇಲ್ಲವೇ ಅತಂತ್ರ ಸರ್ಕಾರ ಬರಲಿದೆಯೇ ಎಂಬುದಕ್ಕೆ ಉತ್ತರ ಸಿಗಲಿದ್ದು, ಕರ್ನಾಟಕದ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೂ ಹೊಸ ಸಂದೇಶವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ.

ಈ ಬಾರಿ ದಾಖಲೆಯ ಶೇ.73.19ರಷ್ಟು ಮತದಾನವಾಗಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ನಾನಾ ರೀತಿಯ ಲೆಕ್ಕಾಚಾರ ಕೂಡ ಆರಂಭವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು ನಮಗೆ ಲಾಭ ತಂದುಕೊಡಲಿದೆ ಎಂದು ಬಿಜೆಪಿ ನಾಯಕರ ವಾದವಾಗಿದೆ.

ಮತಗಟ್ಟೆ ಸಮೀಕ್ಷೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೂ ನಡೆಸಲಾಗಿರುತ್ತದೆ. ಅಂದರೆ ಆ ವೇಳೆಗೆ ಶೇ.50ರ ಆಸುಪಾಸಿನಲ್ಲಿ ಮತದಾನವಾಗಿದ್ದು, ಅದಾದ ಬಳಿಕ ಶೇ.23ರಿಂದ 25ರಷ್ಟು ಮತದಾನವಾಗಿದೆ. ಪ್ರಧಾನಿ ನರೇಂದ್ರಮೋದಿ ಕಾರಣದಿಂದ ಯುವಕರು, ಯುವತಿಯರು ಹಾಗು ಹೊಸ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಇದು ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

Leave a Reply