ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಬಳಿ ಚರ್ಚೆ ನಡೆಸಿದರು.
ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಭೈರತಿ ಬಸವರಾಜ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಮುಖಂಡರಾದ ಎ.ಟಿ.ರಾಮಸ್ವಾಮಿ ಸೇರಿದಂತೆ ಮತ್ತಿತರ ಜೊತೆ ಫಲಿತಾಂಶದ ಸಾಧಕ ಬಾಧಕಗಳ ಬಗ್ಗೆ ಮಾತುಕತೆ ನಡೆಸಿದರು.
ಮತಗಟ್ಟೆ ಸಮೀಕ್ಷೆಗಳು ಪಕ್ಷದ ವತಿಯಿಂದ ಬೂತ್ ಹಂತದಿಂದ ಸಂಗ್ರಹಿಸಿರುವ ವರದಿಗಳು ಇತ್ಯಾದಿಗಳ ಬಗ್ಗೆ ಬೊಮ್ಮಾಯಿ ಅವರು ಬಿಎಸ್‍ವೈ ಬಳಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಮತಗಟ್ಟೆ ಸಮೀಕ್ಷೆಗಳು ಏನೇ ಹೇಳಿದರು ವಾಸ್ತವ ಚಿತ್ರಣವೇ ಬೇರೆ ಇದೆ. ಪ್ರಧಾನಿ ನರೇಂದ್ರಮೋದಿ ಅವರು ಬಂದು ಹೋದ ನಂತರ ಚುನಾವಣಾ ಚಿತ್ರಣವೇ ಬದಲಾಗಿದ್ದು, ಕನಿಷ್ಠ ಪಕ್ಷ 105ರಿಂದ 115 ಸ್ಥಾನಗಳನ್ನು ಪಕ್ಷ ಗೆಲ್ಲುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಸಿಎಂ ಹೇಳಿಕೊಂಡಿದ್ದಾರೆ.
ಒಂದು ವೇಳೆ ಸರಳ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೇ ಇಲ್ಲವೇ ಪಕ್ಷೇತರ ಶಾಸಕರ ನೆರವು ಪಡೆಯಬಹುದೇ ಎಂಬುದರ ಬಗ್ಗೆಯೂ ಮಾತುಕತೆ ನಡೆಸಲಾಗಿದೆ.
ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಮಾಜಿ ಸಚಿವ ಜನಾರ್ಧನ ರೆಡ್ಡಿ ನೇತೃತ್ವದ ಕೆಪಿಪಿ ಕನಿಷ್ಠ ಪಕ್ಷ 2ರಿಂದ 4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಬೊಮ್ಮಾಯಿ ಅವರು ಬಿಎಸ್‍ವೈಗೆ ಹೇಳಿದ್ದಾರೆ.
ಅಲ್ಲದೆ ಚನ್ನಗಿರಿಯಲ್ಲಿ ಪಕ್ಷೇತರ ಶಾಸಕ ಮಾಡಾಳ್ ಮಲ್ಲಿಕಾರ್ಜುನ್, ಹರಪ್ಪನಹಳ್ಳಿ ಪಕ್ಷೇತರ ಅಭ್ಯರ್ಥಿ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ ಸೇರಿದಂತೆ 4 ಸ್ಥಾನಗಳನ್ನು ಪಕ್ಷೇತರರು ಗೆಲ್ಲಬಹುದು. ಇಂಥವರನ್ನು ತಕ್ಷಣವೇ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಬಿಎಸ್‍ವೈ ಸಲಹೆ ಮಾಡಿದ್ದಾರೆ.
ಬಿಜೆಪಿಗೆ ಪೂರ್ಣ ಬಹುಮತ ಬಂದರೆ ಯಾವುದೇ ಸಮಸ್ಯೆ ಇಲ್ಲ. ಕಳೆದ ಬಾರಿಯಂತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಆಪರೇಷನ್ ಕಮಲ ಬದಲು ಪಕ್ಷೇತರ ನೆರವು ಪಡೆದು ಸರ್ಕಾರ ರಚನೆ ಮಾಡುವುದು ಸೂಕ್ತ. ಹೀಗಾಗಿ ಯಾರು ಯಾರ ಜೊತೆ ಸಂಪರ್ಕ ಸಾಧಿಸಬಹುದೋ ಎಲ್ಲವನ್ನು ಬಳಸಿಕೊಳ್ಳಿ ಎಂದು ಸಿಎಂಗೆ ಯಡಿಯೂರಪ್ಪ ಹೇಳಿದ್ದಾರೆ.
ಸ್ಪಷ್ಟ ಬಹುಮತ: ಈ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ
ನಮಗೆ ಸ್ಪಷ್ಟ ಬಹುಮತ ಬರುವುದು ಖಚಿತವಾಗಿದ್ದು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಮತಗಟ್ಟೆ ಸಮೀಕ್ಷೆಗಳ ಚಿತ್ರಣಕ್ಕೂ ವಾಸ್ತವ ಚಿತ್ರಣಕ್ಕೂ ಸಾಕಷ್ಟು ವ್ಯತ್ಯಾವಿದೆ. ನಾವು ಪಕ್ಷದ ವತಿಯಿಂದ ಪ್ರತಿ ಮತಗಟ್ಟೆಯಿಂದಲೂ ಮಾಹಿತಿ ಪಡೆದುಕೊಂಡಿದ್ದೇವೆ. ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ನಿಶ್ಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಜೆಪಿಗೆ ಬಹುಮತ ಬರುವುದರಿಂದ ನಾವು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಬರುವುದಿಲ್ಲ. ಏಕೆಂದರೆ ನಾನು ಮೊದಲಿಂದಲೂ ನಾನು ಒಂದೇ ಮಾತು ಹೇಳುತ್ತಾ ಬಂದಿದ್ದೇನೆ ನಮಗೆ ಸ್ಪಷ್ಟ ಬಹುಮತ ಬರುತ್ತದೆ. ಎಲ್ಲಾ ಕ್ಷೇತ್ರ, ಬೂತ್ ಗಳಿಂದ ಗ್ರೌಂಡ್ ಮಾಹಿತಿ ತರಿಸಿದ್ದೇವೆ ನಮಗೆ ವಿಶ್ವಾಸ ಇದೆ, ಮ್ಯಾಜಿಕ್ ನಂಬರ್ ಮುಟ್ಟುತ್ತೇವೆ ಎಂದರು.




