ಸತೀಶ್ ಜಾರಕಿಹೊಳಿ ಸಚಿವರಾದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ

3 years ago

#Corruption #control #PublicWorksDepartment #PWD #SatishJarakiholi #Minister #dkempanna #Siddaramaiah
ಸುದ್ದಿಗಾರರೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ, ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಸು ನಿಯಂತ್ರಣದಲ್ಲಿದೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದ ಇಲಾಖೆಯ ಮೇಲಿನ ಹಂತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ಬಿಲ್ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಿಎಂ ಬಳಿ ಗುತ್ತಿಗೆದಾರರ ಅಳಲು

ಬೆಂಗಳೂರು: ಲೋಕೋಪಯೋಗಿ ಇಲಾಖೆ ಹೊರತುಪಡಿಸಿ ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ರಾಜ್ಯದ ಗುತ್ತಿಗೆದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದ ನಿಯೋಗವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಲ್ ಪಾವತಿಗಾಗಿ ದೊಡ್ಡ ಪ್ರಮಾಣದ ಲಂಚ ಕೊಡಬೇಕಾಗಿದೆ. ತಕ್ಷಣ ಅದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿತು.

ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅದನ್ನು ಪರಿಹರಿಸುವಂತೆ ಕೋರಿತು. ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಿದ್ದು, ಕೆಲವು ಇಲಾಖೆಗಳಲ್ಲಿ ಬಾಕಿ ಬಿಲ್‌ ಪಾವತಿಗೆ ಭಾರಿ ಮೊತ್ತದ ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ದೂರಿದ್ದಾರೆ.

ಜಾರಕಿಹೊಳಿ ಬಿಗಿ: ಈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ. ಕೆಂಪಣ್ಣ, ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಸು ನಿಯಂತ್ರಣದಲ್ಲಿದೆ. ಸಚಿವ ಸತೀಶ್‌ ಜಾರಕಿಹೊಳಿ ಅವರು ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದ ಇಲಾಖೆಯ ಮೇಲಿನ ಹಂತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಬರುತ್ತಿದೆ ಎಂದು ಹೇಳಿದರು.

ಬಿಲ್ ಬಾಕಿ ಪಾವತಿ ಸೇರಿದಂತೆ ಯಾವುದೇ ವಿಷಯದಲ್ಲೂ ಲೋಕೋಪಯೋಗಿ ಇಲಾಖೆಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಈ ಇಲಾಖೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದು ತಿಳಿಸಿದರು.

ಇದನ್ನು ಹೊರತುಪಡಿಸಿ ಉಳಿದ ಬಹುತೇಕ ಇಲಾಖೆಗಳಲ್ಲಿ ಬಿಲ್‌ ಪಾವತಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹೆಚ್ಚಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇವೆ ಎಂದರು.

ಆಯುಕ್ತರೇ ಕಾರಣ: ಬಿಬಿಎಂಪಿಯಲ್ಲಿ ಬಾಕಿ ಬಿಲ್‌ ಪಾವತಿಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಪ್ರಧಾನ ಎಂಜಿನಿಯರ್‌ ಇಬ್ಬರೂ ಇದಕ್ಕೆ ಪ್ರಮುಖ ಕಾರಣ. ಮೂರು ವರ್ಷಗಳ ಹಳೆಯ ಬಿಲ್‌ಗಳ ಪಾವತಿಗೆ ಭಾರಿ ಮೊತ್ತದ ಕಮಿಷನ್‌ ಕೇಳಲಾಗುತ್ತಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದರು.

ಲಂಚಾವತರಾದಲ್ಲಿ ನಿರತರಾಗಿರುವ ಕೆಲವು ಅಧಿಕಾರಿಗಳ ಹೆಸರು ಸಮೇತ ದಾಖಲೆ ಜೊತೆಗೆ ಮುಖ್ಯಮಂತ್ರಿಯವರಿಗೆ ದೂರು ಹೇಳಿದ್ದೇವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಗುತ್ತಿಗೆದಾರರ ಸಂಘ ಹೋರಾಟ ಆರಂಭಿಸಲಿದೆ ಎಂಬುದನ್ನೂ ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

ಚರ್ಚಿಸಿ ಕ್ರಮ: ನಮ್ಮ ಎಲ್ಲಾ ಮನವಿ ಆಲಿಸಿ,ದಾಖಲೆಗಳನ್ನು ಪಡೆದ ಮುಖ್ಯಮಂತ್ರಿಗಳು ಈ ವಿಷಯವಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಹದಿನೈದು ದಿನಗಳೊಳಗೆ ಈ ಸಮಸ್ಯೆಗೆ ಪರಿಹಾರ ದೊರಕಿದ್ದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ವಿವಿಧ ಇಲಾಖೆಗಳಿಂಧ ₹ 20 ಸಾವಿರ ಕೋಟಿಯಷ್ಟು ಬಿಲ್‌ ಪಾವತಿ ಬಾಕಿ ಇದೆ. ಶೇ 50ರಷ್ಟನ್ನಾದರೂ ತ್ವರಿತವಾಗಿ ಪಾವತಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆದಷ್ಟು ಬೇಗ ಬಿಲ್‌ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Leave a Reply