ಕೊರೊನಾ ಯಾವುದು ಸತ್ಯ, ಯಾವುದು ಸುಳ್ಳು?: ಸಿದ್ದರಾಮಯ್ಯ

5 years ago

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ 2020ರ ಡಿಸೆಂಬರ್ ವರೆಗಿನ ಕೊರೊನಾ ಸಾವಿನ ಸಂಖ್ಯೆ- 12,090. ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆಯ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ- 22,320. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮತ್ತು ಸುಧಾಕರ್ ಅವರೇ, ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಕೊರೊನಾ ಉಲ್ಭಣಕ್ಕೆ ಬಿಜೆಪಿ ಸರ್ಕಾರದ ಅಸಾಮರ್ಥ್ಯ, ಭ್ರಷ್ಟಾಚಾರ ಹಾಗೂ ಸುಳ್ಳುಗಳು ಕಾರಣ ಎಂದು ಮೊದಲ ದಿನದಿಂದ ಹೇಳುತ್ತಾ ಬಂದಿದ್ದೇನೆ. ತಪ್ಪನ್ನು ತಿದ್ದಿಕೊಳ್ಳದೆ ಎಲ್ಲವನ್ನು ಸಮರ್ಥಿಸಿಕೊಂಡ ಸರ್ಕಾರದ ಲಜ್ಜೆಗೇಡಿತನದ ಫಲವನ್ನು ರಾಜ್ಯದ ಜನ ಅನುಭವಿಸಬೇಕಾಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿ ಸರ್ಕಾರ ಸುಳ್ಳು ಹೇಳಿರುವುದು ಕೊರೊನಾ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್ ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿ ವರೆಗೆ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವ ಸುಧಾಕರ್ ಅವರು ಸುಳ್ಳು ಹೇಳುತ್ತಲೇ ಇದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೊರೊನಾ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಿ ನಿಜಸಂಗತಿಯನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ ಎಂದು ಕುಟುಕಿದ್ದಾರೆ.

Leave a Reply