ಅಂಬೇಡ್ಕರ್ ಅವರ ಆಲೋಚನೆಗಳನ್ನು ಸಂಪೂರ್ಣವಾಗಿ ಸಂವಿಧಾನದಲ್ಲಿ ಅಡಕ ಮಾಡಲು ಆಗಿನ ಅನೇಕ ರಾಜಕೀಯ ದುರೀಣರು ಅವಕಾಶ ಮಾಡಿಕೊಟ್ಟಿಲ್ಲ. ಆದುದರಿಂದಲೇ, “ಯಾವುದೇ ತಾಯಿ ತಾನು ಹೆತ್ತ ಮಗುವನ್ನು ತಾನೇ ಸಾಯಿಸಲು ಬಯಸುವುದಿಲ್ಲ. ಆದರೆ ಸಂವಿಧಾನವನ್ನು ಸುಡಬೇಕಾದ ಅಗತ್ಯ ಬಂದರೆ ನಾನು ಬರೆದ ಸಂವಿಧಾನವನ್ನು ನಾನೇ ಸುಡಲು ಮುಂದಾಗುತ್ತೇನೆ” ಎಂದಿದ್ದಾರೆ ಅಂಬೇಡ್ಕರ್. ಸಂವಿಧಾನದಲ್ಲಿ ತಮ್ಮ ಆಶಯಗಳನ್ನು ಪೂರ್ತಿಯಾಗಿ ಅಡಕಮಾಡಲಾಗದಂತೆ ಅಂಬೇಡ್ಕರ್ ಅವರನ್ನು ಅಡ್ಡಿಪಡಿಸಿರುವಂತೆಯೇ ಪೂರ್ವದಲ್ಲಿ ಬಸವಣ್ಣನವರನ್ನು ಕೂಡಾ ಅವರ ಆಶಯಗಳನ್ನು ಅಳವಡಿಸಲಾರದಂತೆ ಯಥಾಸ್ಥಿತಿವಾದಿಗಳು ಅಡ್ಡಿಪಡಿಸಿರುತ್ತಾರೆ.
ಮಹಿಳಾ ವಚನಾಂಕಿತಗಳಲ್ಲಿ ಯಾರಾದರೂ ವಚನ ಬರೆದಿರುವರೇ? ವಚನ ಚಳವಳಿಯಯು ಕೂಡಾ ಪುರುಷ ಪ್ರಧಾನವಾಗಿದೆ ಅಲ್ಲವೇ? ಹೀಗೆಂದು ಯಾರೇ ಪ್ರಶ್ನಿಸಿದ ಮಾತ್ರಕ್ಕೆ ವಚನ ಚಳವಳಿ ಪುರುಷರ ಪರವಾಗಿತ್ತೆಂದು ತೀರ್ಮಾನಿಸಲು ಬರುವುದಿಲ್ಲ. ಹುಟ್ಟು ನಿರ್ವಾಣದಲ್ಲಿ ಅಕ್ಕಮಹಾದೇವಿ ಪುರುಷ ಪಾರಮ್ಯವನ್ನು ಅತ್ಯಂತ ಶಕ್ತಿಯುತವಾಗಿ ಭಂಜಿಸಿದ್ದಾರೆ. ಆಗಿನ ಕಾಲದಲ್ಲಿ ಬಸವಣ್ಣ ಎಲ್ಲಾ ಧರ್ಮೀಯರನ್ನು ಅಪ್ಪಲು ಸಾಧ್ಯವಾಯಿತೇ? ಎಂದು ಕೂಡಾ ಪ್ರಶ್ನಿಸಬಹುದು. ಬಸವಣ್ಣನವರು ಇಷ್ಟಲಿಂಗ ಕಲ್ಪನೆಯ ಮೂಲಕ ತೊಡೆದು ಹಾಕಿದ್ದು ಸನಾತನ ಹಿಂದೂಧರ್ಮದ ಜಾತಿ ಪದ್ದತಿ ಮತ್ತು ಪುರುಷಾಹಂಕಾರವನ್ನು. ಕೇವಲ ಹತ್ತು ವರ್ಷ ಕಾಲ ನೂರು ಮೈಲಿ ವ್ಯಾಪ್ತಿಯಲ್ಲಿ ಜೀವಿಸಿದ್ದ ಶೂದ್ರಾತಿಶೂದ್ರರನ್ನು ಒಳಗೊಂಡು ನಡೆದ ಪ್ರಾದೇಶಿಕ ಚಳವಳಿಯೊಂದನ್ನು ಸಮಸ್ತ ಕನ್ನಡ ನಾಡಿನ ಚಳವಳಿ ಎಂದು ಹೇಳಲು ಹೇಗೆ ಸಾಧ್ಯ? ಹೀಗೂ ಒಂದು ಪ್ರಶ್ನೆಯನ್ನು ಎಸೆಯಬಹುದು. ಹೀಗೆ ಪ್ರಶ್ನಿಸಿದರೂ ತಮಿಳುನಾಡು, ಕಾಶ್ಮೀರ, ಆಂಧ್ರಪ್ರದೇಶ ಮುಂತಾದ ಕಡೆಗಳಿಂದ ಅನೇಕ ಶರಣರನ್ನು ಕನ್ನಡ ನಾಡಿನ ಕಲ್ಯಾಣದ ಅನುಭವ ಮಂಟಪಕ್ಕೆ ಆಕರ್ಷಿಸಿ ಕನ್ನಡದಲ್ಲಿ ವಚನಗಳನ್ನು ಬರೆಯಿಸಿದ ಭಾರತ ಮಟ್ಟದ ದೊಡ್ಡ ಚಳವಳಿ ಇದೆಂದು ಹೇಳಬಹುದು. ಬಸವಾದಿ ಪ್ರಮಥರ ವಚನಗಳ ಆಶಯಗಳು ಧರ್ಮಾತೀತ ಮತ್ತು ಸೀಮಾತೀತವಾಗಿ ಮುಟ್ಟುತ್ತವೆ ಎಂಬುದನ್ನು ಯಾರೂ ನಿರಾಕರಿಸಲಾಗದು. ಬಸವಣ್ಣನಂತೆ ಮತ್ತು ಬಸವಣ್ಣನ ಕಾರಣದಿಂದ ಜನಿವಾರ ಕಿತ್ತೆಸೆದು ಬಂದ ಯಾವ ಬ್ರಾಹ್ಮಣ ವಚನಕಾರನಿದ್ದಾನೆ? ಹೀಗೆ ಯಾರೇ ಪ್ರಶ್ನಿಸಬಹುದು. ಬ್ರಾಹ್ಮಣರ ಮಧುವರಸ ತನ್ನ ಮಗಳನ್ನು ಸಮಗಾರರ ಮಗನಿಗೆ ಕೊಟ್ಟು ಬಸವಣ್ಣನ ನೇತೃತ್ವದಲ್ಲಿ ಲಿಂಗಾಯತೀಕರಿಸಿ ಮದುವೆ ಮಾಡಿದ ಕಾರಣ ಶರಣರ ಕಗ್ಗೊಲೆಗಳೇ ನಡೆದವು. ಬಸವಣ್ಣನವರು ತಮ್ಮ ಆಶಯಗಳನ್ನು ಅನುಷ್ಠಾನಕ್ಕೆ ತರಲಾಗದಂತೆ ಅಡ್ಡಿಪಡಿಸಿದ್ದು ಬ್ರಾಹ್ಮಣರು. ಅಂಬೇಡ್ಕರ್ ಅವರು ಸಂವಿಧಾನ ಬರೆಯುವಾಗ ಇದೇ ವರ್ಗ ಅಡ್ಡಿಪಡಿಸಿದ್ದಾರೆಂಬುದು ನಮಗೇಕೆ ಅರ್ಥವಾಗುತ್ತಿಲ್ಲ? ಅಂಬೇಡ್ಕರ್ ಅವರು ಎಲ್ಲಾ ಧರ್ಮೀಯರನ್ನು ಸಂವಿಧಾನದ ಮೂಲಕ ಇಡೀ ಭಾರತಾದ್ಯಂತ ಅಖಂಡವಾಗಿ ತಬ್ಬಲು ಸಾಧ್ಯವಾಗಿದೆ. ಹೀಗೆ ಆಡಳಿತ ಸೂತ್ರದಲ್ಲಿ ವಚನಗಳು ಸಮಗ್ರ ಭಾರತವನ್ನು ತಬ್ಬುತ್ತವೆಯೇ? ತಬ್ಬಲಾರವಲ್ಲವೇ? ಹೀಗೆ ವಾದ ಹೂಡಬಹುದು. ವಚನಗಳಿರುವುದು ನಮ್ಮ ಅಂತರಂಗ ಬಹಿರಂಗದ ಕೇಡುಗಳನ್ನು ನಿವಾರಿಸಿಕೊಳ್ಳುವ ಸಲುವಾಗಿಯೇ ಹೊರತು ರಾಜಕೀಯ ಸೂತ್ರ ಹಿಡಿಯುವುದಕ್ಕಾಗಿ ಅಲ್ಲ. ಇಷ್ಟಿದ್ದೂ ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆ ಈಗಿನ ಸಂಸತ್ತಿನ ಪರಿಕಲ್ಪನೆಯೇ ಆಗಿರುವುದನ್ನು ಯಾರೂ ನಿರಾಕರಿಸಲಾರರು. ಬಸವಣ್ಣನವರ ಮುಂದುವರೆದ ರೂಪವೇ ಅಂಬೇಡ್ಕರ್. ಅಂಬೇಡ್ಕರ್ ರವರು ವಚನಕಾರರ ಆಶಯಗಳನ್ನು ಸಂವಿಧಾನದ ರಾಜಕೀಯ ಸೂತ್ರದಿಂದ ಸಕಲರ ನಡೆಯಾಗಿ ಅಳವಡಿಸಿದರು.
ಅಂಬೇಡ್ಕರ್ ರವರ ಸಂವಿಧಾನವನ್ನು ಖುರಾನ್ ಭಗವದ್ಗೀತೆಗಳಂತೆ ಪವಿತ್ರವೆಂದು ಪೂಜನೀಯಗೊಳಿಸುವುದು ಬೇಡ. ಖುರಾನ್ ಭಗವದ್ಗೀತೆಗಿಂತಲೂ ಸಂವಿಧಾನ ಅತ್ಯಂತ ಮಹತ್ವದ್ದೆಂದು ನಾವು ತಿಳಿಯಬೇಕಾಗಿದೆ. ಬಸವಾದಿ ಪ್ರಮಥರ ವಚನಗಳನ್ನು ಮತ್ತು ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಹೊಸ ಪ್ರವೇಶಿಕೆಯಿಂದ ಅಭ್ಯಾಸ ಮಾಡಲು ಇಡೀ ಭಾರತೀಯರು ತೊಡಗಿಕೊಳ್ಳಬೇಕಾದ ಅಗತ್ಯವಿದೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಬರಹಗಾರರು




