ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ವಿರೋಧ ಪಕ್ಷಗಳು ತಮ್ಮ ಶಕ್ತಿ ಪ್ರದರ್ಶಿಸಲು ಮುಂದಾಗಿವೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಒಟ್ಟು 26 ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಎಲ್ಲಾ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೋಜನ ಕೂಟ ಆಯೋಜಿಸಿದ್ದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಯುಪಿಎ ಮಿತ್ರ ಪಕ್ಷಗಳು ಬಹುಮತವನ್ನು ಸಾಧಿಸಲಿವೆ. ಬಿಜೆಪಿ ಮಿತ್ರ ಪಕ್ಷಗಳು ಸೋಲನ್ನು ಅನುಭವಿಸಲಿದ್ದು, ವಿಪಕ್ಷಗಳ ಒಕ್ಕೂಟ ಗೆಲುವು ಸಾಧಿಸಲಿವೆ ಎಂದು ತಿಳಿಸಿದರು.
ವಿಪಕ್ಷಗಳ ಒಕ್ಕೂಟದ ಎರಡನೇ ಸಭೆ ನಾಳೆ ನಡೆಯುತ್ತಿದ್ದು ಸುಮಾರು 24 ಪಕ್ಷದ ನಾಯಕರು ನಾಳಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲರೂ ಒಟ್ಟುಗೂಡಿ ಚುನಾವಣೆ ಎದುರಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಬಂದ ನಂತರ ಬೆಲೆ ಏರಿಕೆ, ಬಡವರು, ರೈತರು, ದಲಿತರು ಇಂದು ಬದುಕಲು ಅಸಾಧ್ಯವಾದ ಪರಿಸ್ಥಿತಿ ಬಂದಿದೆ. ಕೋಮುವಾದದಿಂದ ಎಲ್ಲರೂ ಆತಂಕದಿಂದ ಬದುಕುವಂತಾಗಿದೆ. ಇದು ಬಿಜೆಪಿಯ ಕೊಡುಗೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮೋದಿಯವರನ್ನು ಸಮರ್ಥವಾಗಿ ಎದುರಿಸಲಾಗಿದೆ. ವಿಧಾನಸಬಾ ಚುನಾವಣಾ ಸಂದರ್ಭದಲ್ಲಿ ಮೋದಿಯವರು 28 ಕಡೆ ಪ್ರವಾಸ ಕೈಗೊಂಡಿದ್ದು, ಅವರು ಬಂದ ಕಡೆಗಳೆಲ್ಲಾ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಕರ್ನಾಟಕದಿಂದಲೇ ಬಿಜೆಪಿಯ ಅವನತಿ ಪ್ರಾರಂಭವಾಗಿದೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರಿಗೆ ಸ್ಪಷ್ಟವಾದ ಬಹುಮತ ದೊರೆಯಲು ಸಾದ್ಯವಿಲ್ಲ ಎಂದರು.
ಜೆಡಿಎಸ್ ಗೆ ಸಿದ್ಧಾಂತವೇ ಇಲ್ಲ. ಬಿಜೆಪಿಗೆ ಬೆಂಬಲ ಸೂಚಿಸಿದ ನಂತರ ಅವರ ಜಾತ್ಯಾತೀತತೆ ಏನಾಯಿತು. ಪಕ್ಷವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಸಿದ್ಧಾಂತವನ್ನು ಬಲಿ ಕೊಡುತ್ತಿದ್ದಾರೆ ಎಂದರ್ಥ ಎಂದರು.
ಸೇಡಿನ ರಾಜಕಾರಣ: ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮಾತನಾಡಿ, ಕೇಂದ್ರದ ಸೇಡಿನ ನಡೆಯಿಂದ ರಾಹುಲ್ ಗಾಂಧಿ ಅವರನ್ನ ಸಂಸತ್ ಸ್ಥಾನದಿಂದ ವಜಾ ಮಾಡಲಾಗಿದೆ. ಮಣಿಪುರದಲ್ಲಿ ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದರೂ ಅವರ ಕಷ್ಟ ಆಲಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿಲ್ಲ. ಈ ಸಭೆಯಲ್ಲಿ ಭವಿಷ್ಯದ ನಡೆ ಬಗ್ಗೆ ಸ್ಪಷ್ಟ ತೀರ್ಮಾನ ಮಾಡಲಾಗುವುದು. ಲೋಕಸಭಾ ಚುನಾವಣಾ ತಂತ್ರಗಾರಿಕೆ ಬಗ್ಗೆಯೂ ಚರ್ಚಿಸಲಾಗುವುದು. ಪ್ರಜಾಪ್ರಭುತ್ವ, ಸಂವಿಧಾನದ ಉಳಿಯಬೇಕಿದೆ. ಇದೇ ಕಾರಣಕ್ಕೆ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ ವಿರೋಧಿಗಳ ಧ್ವನಿ ಅಡಗಿಸುತ್ತಿದೆ. ರಾಹುಲ್ ಗಾಂಧಿ ಅವರನ್ನ ಅನರ್ಹ ಮಾಡಿರುವುದು ಇದಕ್ಕೆ ಉದಾಹರಣೆ. ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕೂಡ ಇದೇ ಕಾರಣಕ್ಕೆ ಆಗಿದೆ. ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿ ವಿಪಕ್ಷಗಳ ಧ್ವನಿ ಅಡಗಿಸಲಾಗುತ್ತಿದೆ ಎಂದು ದೂರಿದರು.
ದೇಶದಲ್ಲಿ ಬೆಲೆ ಏರಿಕೆ, ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಜನರಿಗೆ ಇದೆಲ್ಲದರ ಅರಿವು ಇದೆ. ಅವರಿಗೆ(ಬಿಜೆಪಿ) ಯಾವ ಪಾಠ ಕಲಿಸಬೇಕು ಅಂತ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
26 ವಿಪಕ್ಷಗಳು ಒಟ್ಟಿಗೆ ಮುನ್ನಡೆಯುವ ತೀರ್ಮಾನ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗುತ್ತಿದ್ದೇವೆ. ಈ ಬೆಳವಣಿಗೆ (ವಿಪಕ್ಷಗಳ ಸಭೆ) ಭಾರತದ ಗೇಮ್ ಚೇಂಜರ್ ಆಗಲಿದೆ. ಪಾಟ್ನಾ ಸಭೆ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ. ಅವರು (ಎನ್ ಡಿಎ) ಕೂಡ ತಮ್ಮ ಮೈತ್ರಿ ಕೂಟದ ಸಭೆ ನಡೆಸುತ್ತಿದ್ದಾರೆ. ಈ ವಿಪಕ್ಷಗಳ ಒಕ್ಕೂಟ ಸಭೆಯ ಮುಂದಾಳತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದೆ ಎಂದರು.



