ಯಡಿಯೂರಪ್ಪ ನಂತರ ಲಿಂಗಾಯತ, ಉಕ ಮಂದಿಗೆ ಏನು? ಕಾಂಗ್ರೆಸ್ ಎಂ.ಬಿ. ಪಾಟೀಲರನ್ನು ಕನಿಷ್ಠ ಉಪ ಮುಖ್ಯಮಂತ್ರಿ ಅಂತಾದರೂ ಘೋಷಿಸಬೇಕಿದೆ!
ಹೌದು.. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಲಿಂಗಾಯತರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಗುದಮುರಗಿಗೆ ಈಗ ಬಿಜೆಪಿ ಬಿದ್ದಿದೆ. ಬರೀ ಆ ನಾಯಕ ಲಿಂಗಾಯತನಾಗಿದ್ದರೆ ಸಾಕು, ಅದೊಂದು ಕಾರಣಕ್ಕೆ ಲಿಂಗಾಯತರು ಬಿಜೆಪಿಗೆ ಕಣ್ಣು ಮುಚ್ಚಿ ಓಟು ಹಾಕುತ್ತಾರೆ, ‘ಮೇಲೆ ಹೇಗೂ ಮೋದಿ ಇದ್ದಾರೆ’ ಎನ್ನುವ ತಿಳಿವು ಬಿಜೆಪಿಗೆ ಇದ್ದಂತಿದೆ. ಅದಕ್ಕೆ ಕಾರಣವೂ ಇದೆ. ಯಡಿಯೂರಪ್ಪ ಬಿಟ್ಟರೆ ಬೆನ್ನೆಲುಬು ಗಟ್ಟಿಗಿರೋ ಮತ್ತೊಬ್ಬ ನಾಯಕನೂ ಬಿಜೆಪಿಯಲ್ಲಿ ಇಲ್ಲದಿರುವುದು! ಹಾಗಂತ ಅವರ ಬಿಟ್ ಇವರು, ಇವರು ಬಿಟ್ ಅವರು ಅಂತ ಹಾಕ್ಯಾಡುವ ಸ್ಥಿತಿ ಇದೆ. ಇದ್ದುದರಲ್ಲಿ ಬಸವನಗೌಡ ಯತ್ನಾಳ ಗಟ್ಟಿಯಾಗಿದ್ದರೂ ಅವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಇನ್ನು ಶೆಟ್ಟರ್, ಬೊಮ್ಮಾಯಿ, ಸೌದಿ ಸೇರಿ ಯಾರೊಬ್ಬರೂ ಮತ ತರುವ ಮಾಸ್ ಲೀಡರ್‌ಗಳಲ್ಲ. ಹೀಗಿರುವ ಬಿಜೆಪಿಯ ಹಲವು ‘ಲಿಂಗಾಯತ ನಾಯಕ’ರ ಮುಖಕ್ಕೆ ಮತ ಬರುವುದಿರಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರು ಗೆದ್ದರೆ ಸಾಕೆನ್ನುವಂತಿದೆ. ಇನ್ನು ನಾಯಕತ್ವ ಗುಣವಿರುವ ಬೇರೆ ಸಮುದಾಯದ ಆಕರ್ಷಕ ಮುಖವೂ ಆ ಪಕ್ಷದಲ್ಲಿ ಸದ್ಯಕ್ಕಿಲ್ಲ. ನಿಜಕ್ಕೂ ಇದು ಕರ್ನಾಟಕದ ಬಿಜೆಪಿಗೆ ಸತ್ವ ಪರೀಕ್ಷೆಯ ಕಾಲ. ಅದರ ರಾಷ್ಟ್ರೀಯ ನಾಯಕರ ಒದ್ದಾಟದಿಂದ ಇದು ಎದ್ದು ಕಾಣುತ್ತಿದೆ. ಅದೇ ಕಾರಣಕ್ಕೆ ಪದೇ ಪದೇ ಕರ್ನಾಟಕಕ್ಕೆ ಬರುತ್ತಿದ್ದಾರೆ. ಇವತ್ತು ಯಡಿಯೂರಪ್ಪರ ಜನ್ಮ ದಿನದಂದೇ ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಿಸಿ, ಅವರನ್ನು ಹಾಡಿ ಹೊಗಳಲಾಗುತ್ತಿದೆ.
ಬಿಜೆಪಿ ಉತ್ತರ ಕರ್ನಾಟಕದ ಲಿಂಗಾಯತರಿಂದಲೇ ತನ್ನ ಕಮಲ ಅರಳಿಸಿಕೊಂಡಿದೆ. ಯಡಿಯೂರಪ್ಪರ ಮುಖ, ಶ್ರಮ, ಹೋರಾಟವೂ ಇದಕ್ಕೆ ಮುಖ್ಯ ಕಾರಣ. ಹೀಗೆ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪರನ್ನು ಬಿಜೆಪಿಯ ”ಒಳ ಖೋಲಿ”ಯ ಜನ ಮೊದಲಿಂದ ಮಾನಸಿಕವಾಗಿ ಹಿಂಸಿಸುತ್ತಲೇ ಬಂದಿದ್ದಾರೆ. ಇದನ್ನೂ ಲಿಂಗಾಯತರು ಗಮನಿಸುತ್ತ ಬಂದಿದ್ದಾರೆ ಮತ್ತು ಅವರು ಕೆಜಿಪಿ ಕಟ್ಟಿದಾಗ ಬೆನ್ನಿಗೆ ನಿಂತು ತೋರಿಸಿದ್ದಾರೆ. ಇಷ್ಟಿದ್ದೂ ಆ ಪಕ್ಷದ ದೆಹಲಿ ನಾಯಕರಿಗೆ ಈ ಸಮಯದವರೆಗೂ ತಮ್ಮ ಪಕ್ಷವನ್ನು ಪ್ರಾಮಾಣಿಕವಾಗಿ ಸಂಭಾಳಿಸುವುದು ಆಗುತ್ತಿಲ್ಲ. ಮೋದಿ ಮೇನಿಯಾದಲ್ಲೇ ಎಲ್ಲ ಮರೆತಂತಿದೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಜಾಣ್ಮೆ ಮೆರೆಯಬೇಕಿದೆ. ಯಡಿಯೂರಪ್ಪ ಬಿಟ್ಟು ಯಾರನ್ನೇ ಮುಂದೆ ಮಾಡಿದರೂ ಲಿಂಗಾಯತರು ಬಿಜೆಪಿಯಿಂದ ವಿಮುಖರಾಗುವುದು ಶತಃ ಸಿದ್ಧ. ಅವರು ವಲಸೆಗೆ ಸಿದ್ಧರಾಗಿದ್ದಾರೆ ಮತ್ತು ಪರ್ಯಾಯ ನಾಯಕನನ್ನು ಹುಡುಕುತ್ತಿದ್ದಾರೆ. ಈಗ ಕಾಂಗ್ರೆಸ್ ಎಂ.ಬಿ. ಪಾಟೀಲರನ್ನು ಕನಿಷ್ಟ ಉಪ ಮುಖ್ಯಮಂತ್ರಿ ಅಭ್ಯರ್ಥಿ ಅಂತಾದರೂ ಘೋಷಿಸಿದರೆ ಯಡಿಯೂರಪ್ಪರ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತಿದ್ದ ಅರ್ಧದಷ್ಟು ಲಿಂಗಾಯತರಾದರೂ ಇತ್ತ ವಾಲುತ್ತಾರೆ. ತಮಗೊಬ್ಬ ನಾಯಕ ಸಿಕ್ಕಾನು ಎನ್ನುವ ಇರಾದೆಗೆ ಅವರು ಆಸೆ ಪಡಬಹುದು.
ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಶ್ರಮದಿಂದ ಮಹತ್ವಾಕಾಂಕ್ಷೆಯ ನೀರಾವರಿ ಕೆಲಸಗಳನ್ನು ಸಾಕಾರಗೊಳಿಸಿ ಹೌದೆನ್ನಿಸಿಕೊಂಡವರು. ಲಿಂಗಾಯತ ಚಳವಳಿಯಿಂದ ರಾಜ್ಯದಲ್ಲಿ ಯಡಿಯೂರಪ್ಪರಿಗೆ ಪರ್ಯಾಯವಾಗಿ ಬೆಳೆದವರು. ಇವರಿಗೆ ಸಾಮಾನ್ಯರೆಡೆ ಕಾಳಜಿ, ಮತ ಸೆಳೆವ ನಾಯಕತ್ವದ ಮುಖವೂ ಇದೆ. ಕಾರ್ಯಕ್ಷಮತೆಯ ಅನುಭವ, ಹೊಸ ವಿಚಾರ, ವಿದ್ಯಾವಂತಿಕೆ, ಸರಳತೆಗಳಿವೆ. ಇದೆಲ್ಲವನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸಿ ಗಂಭೀರವಾದರೆ ಅದಕ್ಕೇ ಅನುಕೂಲ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಸ್ಪರ್ಧೆ ಇದೆ. ಇದು ಸಾಮೂಹಿಕ ನಾಯಕತ್ವ ಅಂತ ಹೋಗಿ, ಚುನಾವಣೆ ನಂತರ ಬಗೆ ಹರಿವ ಮಾತು. ಅದಕ್ಕಾಗಿ ಹಿಂದುಳಿದ ವರ್ಗಕ್ಕೆ ಒಂದು ಮತ್ತು ಲಿಂಗಾಯತರಿಗೆ ಒಂದು ಅಂತ ಈಗಲೇ ಉಪ ಮುಖ್ಯಮಂತ್ರಿ ಸ್ಥಾನ ಘೋಷಿಸಿದರೆ ಅದು ಖಂಡಿತ ಕಾಂಗ್ರೆಸ್‌ನ ಜಾಣತನವಾಗಲಿದೆ. ಹೀಗಾದರೆ, ಲಿಂಗಾಯತರಿಗಲ್ಲದೇ ರಾಜ್ಯಕ್ಕೂ ಹೊಸ ನಾಯಕರು ಸಿಕ್ಕಾರು. ಇಂತಹ ಬೆಳವಣಿಗೆಗೆ ಕಾಲ ಕೂಡ ಪಕ್ವವಾಗಿದೆ. ಉಕದ ನೆಲದಲ್ಲೇ ಬಿಜೆಪಿಗೆ ಬಲವಿದೆ. ಪಾಟೀಲರನ್ನು ಅಖಾಡಕ್ಕೆ ಇಳಿಸಿದರೆ ಆ ಪಕ್ಷಕ್ಕೆ ಗೆಲ್ಲುವುದು ಕಷ್ಟ. ಇನ್ನು ಸರ್ವ ಜನಾಂಗದ ಹಿತ ಬಯಸುವುದೇ ಬಸವಾದಿ ಶರಣರ ಆಶಯದ ಲಿಂಗಾಯತ ಗುಣ. ಅದನ್ನು ಎಂ.ಬಿ. ಪಾಟೀಲರು ಅಳವಡಿಸಿಕೊಂಡಿದ್ದಾರೆ ಮತ್ತು ಒಂದಷ್ಟು ಆಚರಣೆಗೂ ತಂದು ತೋರಿದ್ದಾರೆ. ಹಣೆಗೆ ಗಂಧ ಹಚ್ಚಿಕೊಳ್ಳುವ ಯಡಿಯೂರಪ್ಪರನ್ನು ಲಿಂಗಾಯತರು ಒಪ್ಪಿಕೊಂಡಿದ್ದರು, ಇನ್ನು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಶುರು ಮಾಡಿ ‘ಬಸವ ಸಾಹಿತ್ಯ’ವನ್ನು ತಲುಪಿಸುತ್ತಿರುವ, ವಿಭೂತಿ ಧರಿಸುವ ಪಾಟೀಲರನ್ನು ಸಹಿಸೋಲ್ಲವೇ ಉಕ ಜನ? ಕೋವಿಡ್ ಸಂದರ್ಭ ತಮ್ಮ blde ಆಸ್ಪತ್ರೆಯಲ್ಲಿ ಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ನೀರಿಲ್ಲದೇ ಒಣಗಿ ಹೋಗಿದ್ದ ಬಿಜಾಪುರವನ್ನೀಗ ಹತ್ತು ಸಾವಿರ ಕೋಟಿಯಷ್ಟು ಅನುದಾನ ತಂದು ಹಸಿರ ನಾಡು ಮಾಡಿದ್ದಾರೆ. ಒಟ್ಟು ಐವತ್ತಾರು ಸಾವಿರ ಕೋಟಿಯಷ್ಟು ನೀರಾವರಿ ಕೆಲಸ ಮಾಡಿದ್ದಾರೆ. ಹೋಗದ ಜಾಗಕ್ಕೂ ಕಾಲುವೆ ಕೊರೆಸಿ ನೀರು ನೀಡಿದ್ದಾರೆ. ಲಕ್ಷಗಟ್ಟಲೇ ಮರಗಿಡಗಳನ್ನು ನೆಡಿಸಿದ್ದಾರೆ. ಇಂತಹ ಒಬ್ಬ ಜನಪರ ನಾಯಕ ಮುನ್ನೆಲೆಗೆ ಬಂದರೆ ತಪ್ಪೇನು? ನೀವೇ ಹೇಳಿ. ಕಾಂಗ್ರೆಸ್ ಮನಸ್ಸು ಮಾಡಬೇಕಷ್ಟೇ.
ಸಕಾರಾತ್ಮಕ ವಿಚಾರ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯ ಆಸೆಗೆ ಸದ್ಯದ ರಾಜಕೀಯ ಸ್ಥಿತಿಯನ್ನು ವಿಶ್ಲೇಷಿಸಿರುವೆ, ನನಗೆ ಬೇರೆ ಉದ್ದೇಶವಿಲ್ಲ. ಇನ್ನು ಇದರಲ್ಲೂ ಕೊಂಕು ಹುಡುಕುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಯಾರೇ ಬರೀ ಸುಳ್ಳು ಹೇಳುವ ಬದಲು, ರಾಜ್ಯಕ್ಕೆ ಒಳಿತಾದರೆ ಸಾಕು.
– ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ




