ಕಾಂಗ್ರೆಸ್ ನಾಯಕರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ: ಆರ್.ಅಶೋಕ್

2 years ago

ಬೆಂಗಳೂರು: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರು ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಸ್ವತಃ ಪ್ರಧಾನಿ ನರೇಂದ್ರಮೋದಿಯವರೇ ಹೇಳಿರುವಾಗ ಪದೇ ಪದೇ ಇದೇ ಮಾತು ಪ್ರಸ್ತಾಪಿಸುತ್ತಿರುವ ಉದ್ದೇಶವಾದರೂ ಏನು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಸಂವಿಧಾನ ಬದಲಾವಣೆ ಮಾಡುವಂಥ ದುಸ್ಸಾಹಕ್ಕೆ ಬಿಜೆಪಿ ಎಂದಿಗೂ ಕೈ ಹಾಕುವುದಿಲ್ಲ. ದಿವಂಗತ ಇಂದಿರಾಗಾಂಧಿಯವರು ಸಂವಿಧಾನವನ್ನೇ ಬುಡುಮೇಲು ಮಾಡಿದಾಗ ಕಾಂಗ್ರೆಸ್ ನವರು ಏಕೆ ಸುಮ್ಮನಿದ್ದರು ಎಂದರು.

ಸಂವಿಧಾನವು ಭಗವದ್ಗೀತೆಗಿಂತಲೂ ದೊಡ್ಡದು. ಸಂವಿಧಾ‌ನವೇ ಶ್ರೇಷ್ಠ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸದ ಅನಂತ ಕುಮಾರ ಹೆಗಡೆ ಸೇರಿದಂತೆ ಯಾರೇ ಸಂವಿಧಾನದ ವಿರುದ್ಧ ಮಾತನಾಡಿದರೂ ಪಕ್ಷ ಒಪ್ಪುವುದಿಲ್ಲ. ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿದೆ. ಅದಕ್ಕಾಗಿ ಜನರ ದಿಕ್ಕು ತಪ್ಪಿಸಲು ಸಂವಿಧಾನವನ್ನು ಮುಂದಿಟ್ಟುಕೊಂಡು ಸುಳ್ಳು ಹೇಳುತ್ತಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಪ್ರಧಾನಿ ವಿರುದ್ಧ ಕೀಳುಮಟ್ಟದ ವೈಯಕ್ತಿಕ ನಿಂದನೆ ನಡೆಸುತ್ತಿರುವುದು ಖಂಡನೀಯ. ಅಂತಹವರ ವಿರುದ್ಧ ಕೇಂದ್ರ ಚುನಾವಣಾ ಆಯೋಗ ತಕ್ಷಣ ಕ್ರಮ ಜರುಗಿಸಬೇಕು ಎಂದರು.

ನರೇಂದ್ರಮೋದಿ ಅವರು ಪ್ರಧಾನಿಯಾದ ಬಳಿಕ ಭಯೋತ್ಪಾದಕ ಕೃತ್ಯಗಳು ಶೇ.90 ಕಡಿಮೆಯಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ದಿನ ಬಾಂಬ್ ಬ್ಲಾಸ್ಟ್ ಆಗುತ್ತಿತ್ತು. ದೇಶದಲ್ಲಿ ನರೇಂದ್ರಮೋದಿ ದೇಶ ಕಾಯುತ್ತಿದ್ದಾರೆ. ದೇಶದ ರಕ್ಷಣೆ ಮಾಡುತ್ತಿದ್ದಾರೆ. ರಾಷ್ಟ್ರದ ಭದ್ರತೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಉಗ್ರರು ಕಾಂಗ್ರೆಸ್ ಪಕ್ಷದ ಸಹೋದರಿಯಂತಿರುವ ಮಮತಾ ಬ್ಯಾನರ್ಜಿ ಅವರ ತವರಿನಲ್ಲೇ ಸಿಕ್ಕಿಬಿದ್ದಿದ್ದು, ಕರ್ನಾಟಕದ ಪರವಾಗಿ ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಆರೋಪಿಗಳ ಬಂಧನದಿಂದ ನಾಡಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.

Leave a Reply