ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೂ ಮುನ್ನವೇ ಅಭ್ಯರ್ಥಿ ಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಿದೆ.
ಕಾಂಗ್ರೆಸ್ ಟಿಕೆಟ್ ಹಂಚಿಕೆ ಸಂಬಂಧ ಕಳೆದ ಎರಡು ದಿನಗಳ ಕಾಲ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆ ಬಹುತೇಕ 125 ಕ್ಷೇತ್ರಗಳಿಗೆ ಸಂಭವನೀಯ ಓರ್ವ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದೆ.
ಸ್ಕ್ರೀನಿಂಗ್ ಕಮಿಟಿಯಲ್ಲಿ ಅಂತಿಮಗೊಳಿಸಿದ ಹೆಸರುಗಳಿಗೆ ಕೇಂದ್ರ ಚುನಾವಣಾ ಸಮಿತಿಯ ಅಂತಿಮ ಮುದ್ರೆ ಪಡೆದು ಬಳಿಕ ಮಾರ್ಚ್ 15 ರೊಳಗಾಗಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಸದ್ಯ ಅಂತಿಮಗೊಂಡಿರುವ ಪಟ್ಟಿಯಲ್ಲಿ
ಹಾಲಿ ಶಾಸಕರನ್ನು ಒಳಗೊಂಡಂತೆ ಕಳೆದ ಬಾರಿಯ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತು ಈ ಬಾರಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.
ಹಾಲಿ ಶಾಸಕರ ಹೊರತಾಗಿ ಉಳಿದ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಯಾವುದೇ ಬಂಡಾಯದ ಸ್ಥಿತಿ ನಿರ್ಮಾಣ ಆಗದಂತೆ ಎಚ್ಚರಿಕೆಯ ಹೆಜ್ಜೆಯನ್ನು ಇಡಲು ತೀರ್ಮಾನಿಸಲಾಗಿದೆ.
ಚುನಾವಣಾ ಪ್ರಚಾರದ ದೃಷ್ಟಿಯಲ್ಲಿ ಆದಷ್ಟು ಶೀಘ್ರದಲ್ಲೇ ಮೊದಲ ಪಟ್ಟಿ ಬಿಡುಗಡೆ ಮಾಡುವಂತೆ ಆಕಾಂಕ್ಷಿಗಳ ಒತ್ತಡವೂ ಜಾಸ್ತಿಯಾಗುತ್ತಿದೆ. ಪಟ್ಟಿ ಪ್ರಕಟ ವಿಳಂಬ ಆದಷ್ಟು ಕ್ಷೇತ್ರದಲ್ಲಿ ಪ್ರಚಾರಕ್ಕೂ ಅಡ್ಡಿ ಉಂಟಾಗಲಿದೆ ಎಂಬುವುದು ಆಕಾಂಕ್ಷಿಗಳ ಆತಂಕವಾಗಿದೆ.
ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಅಂತಿಮ ಆಗದೆ ಇದ್ದರೂ ಕೆಲವುಕಡೆ ಮೌಕಿಕವಾಗಿ ಕೆಲವರಿಗೆ ಚುನಾವಣೆಗೆ ಸಿದ್ದತೆ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ ಎಂಬ ಮಾಹಿತಿಯೂ ಇದೆ.
ಒಟ್ಟಿನಲ್ಲಿ ಮಾರ್ಚ್ 15 ರೊಳಗಾಗಿ ಮೊದಲ ಪಟ್ಟಿ ಪ್ರಕಟ ಮಾಡಲು ಎಲ್ಲಾ ರೀತಿಯ ಕಸರತ್ತನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.
ಸ್ಕ್ರೀನಿಂಗ್ ಕಮಿಟಿ ಸಭೆಯ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಕ್ರೀನಿಂಗ್ ಕಮಿಟಿಯಲ್ಲಿ ಇದುವರೆಗೆ ಸುಮಾರು 170 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಲಾಗಿದ್ದು ಅನೇಕ ಕಡೆ ಒಮ್ಮತದ ಅಭಿಪ್ರಾಯ ಮೂಡಿದೆ ಎಂದು ಹೇಳಿದರು
ಗೆಲುವಿನ ಮಾನದಂಡ, ಸಾಮಾಜಿಕ ನ್ಯಾಯ ಮತ್ತು ಪಕ್ಷಕ್ಕೆ ಬದ್ಧತೆಯೇ ಟಿಕೆಟ್ ಹಂಚಿಕೆಗೆ ಪ್ರಮುಖ ಮಾನದಂಡವಾಗಿದೆ. ಸದ್ಯ 170 ಸೀಟುಗಳ ಕುರಿತು ಚರ್ಚಿಸಿದ್ದೇವೆ, ಇನ್ನೂ ಸುಮಾರು 50 ಕ್ಷೇತ್ರಗಳು ಉಳಿದಿವೆ. ಚರ್ಚಿಸಿ ನಮ್ಮ ಅಭಿಪ್ರಾಯವನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸುತ್ತೇವೆ. ಯಾವುದೇ ಗೊಂದಲವಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು.
ನಾಳೆಯಿಂದ ಸುಮಾರು 50-60 ಕ್ಷೇತ್ರಗಳ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳನ್ನು ಕರೆಸಿಕೊಂಡು ಭಿನ್ನಾಭಿಪ್ರಾಯಗಳಿದ್ದರೆ ನಿವಾರಿಸಿಕೊಳ್ಳುತ್ತೇವೆ ಎಂದರು.




