ಗ್ಯಾರಂಟಿ ಮತ್ತು ಭಾಗ್ಯಗಳಿಗೆ ಹಂಚುವುದರಿಂದ ರೈತರಿಗೆ ಕೊಡಲು ಸರ್ಕಾರದ ಹಣವೇ ಇಲ್ಲ
ಬೆಂಗಳೂರು: ರಾಜ್ಯದ ರೈತರಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಆತ್ಮಹತ್ಯೆ ಗ್ಯಾರಂಟಿ ನೀಡಿದೆ. ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬರಗಾಲದ ದವಡೆ ಸಿಲುಕಿರುವ ರೈತ ಹಲವಾರು ಸಮಸ್ಯೆಗಳಿಂದ ನರಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನೀತಿಯ ಕಾರಣಗಳಿಂದಾಗಿ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ ಕಾಂಗ್ರೆಸ್ ಆಡಳಿತದಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆಯೂ ಹೆಚ್ಚು. 2015-16 ರಲ್ಲಿ 1,525, 2016-17 ರಲ್ಲಿ 1203, 2017-18ರಲ್ಲಿ 1320 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಆತ್ಮಹತ್ಯೆ ಪ್ರಮಾಣ ಕಡಿಮೆ ಆಯಿತು. 2019-20 ರಲ್ಲಿ 1,091, 2020-21 ರಲ್ಲಿ 855, 2021-22 ರಲ್ಲಿ 963 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಿದ್ದರಾಮಯ್ಯ ಅವಧಿಯಲ್ಲಿ 9 ತಿಂಗಳಲ್ಲಿ 900 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಬರದಿಂದಾಗಿ ಈವರೆಗೆ 11,18,527 ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿದೆ. ಆದರೆ, ಸರ್ಕಾರ ಒಬ್ಬನೇ ಒಬ್ಬ ರೈತನಿಗೂ ಒಂದು ಪೈಸೆ ಪರಿಹಾರ ನೀಡಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಅತಿವೃಷ್ಟಿಯಿಂದ 39,74,741 ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಷ್ಟವಾಗಿತ್ತು. ಆಗ ನಾವು ಕೇಂದ್ರದ ನೆರವಿಗೆ ಕಾಯದೇ ಒಂದು ಹೆಕ್ಟೇರ್ಗೆ ₹6,800 ರ ಬದಲಿಗೆ ₹13,600 ರಂತೆ ನಿಯಮಕ್ಕಿಂತ ಎರಡು ಪಟ್ಟು ಹೆಚ್ಚು ಪರಿಹಾರ ನೀಡಿದ್ದೆವು. ತೋಟಗಾರಿಕೆ ಬೆಳೆಗೆ ₹13,000 ದ ಬದಲು ₹25,000, ನೀರಾವರಿ ಬೆಳೆಗೆ ₹18,000 ಬದಲು ₹28,000 ಪರಿಹಾರ ನೀಡಿದ್ದೆವು. ಇವರು ಗ್ಯಾರಂಟಿಗೆ ಹಣ ಖಾಲಿ ಮಾಡಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ದಿವಾಳಿ ಆಗಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಇದ್ದಬದ್ದ ಹಣವನ್ನು ಗ್ಯಾರಂಟಿ ಮತ್ತು ಭಾಗ್ಯಗಳಿಗೆ ಹಂಚುತ್ತಿದ್ದಾರೆ. ಇದರಿಂದ ರೈತರಿಗೆ ಕೊಡಲು ಸರ್ಕಾರದ ಹಣವೇ ಇಲ್ಲ. ಪಡಿತರ ಅಕ್ಕಿಯ ಬದಲಿಗೆ ಹಣವನ್ನು ಒಂದು ತಿಂಗಳು ಮಾತ್ರ ಕೊಟ್ಟಿದ್ದು, ಎರಡನೇ ತಿಂಗಳು ಅರ್ಧಂಬರ್ಧ ಜನರಿಗೆ ಮಾತ್ರ ಕೊಟ್ಟಿದ್ದಾರೆ. ಸರ್ವರ್ ಬಂದ್ ಮಾಡಿರುವುದರಿಂದ ಯಾರಿಗೂ ನೋಂದಣಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.




