ಕಾಂಗ್ರೆಸ್ ವತಿಯಿಂದ ಗಾಂಧಿ ನಡಿಗೆ ಕಾರ್ಯಾಗಾರ

5 years ago

ಕಾಂಗ್ರೆಸ್ ವತಿಯಿಂದ ಗಾಂಧಿ ನಡಿಗೆ ಕಾರ್ಯಾಗಾರ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಯಲಹಂಕ ವಿಧಾನಸಭಾ ಕ್ಷೇತ್ರದ ವತಿಯಿಂದ ಸೆ. 29ರಂದು ಸೋಲದೇವನಹಳ್ಳಿಯಲ್ಲಿ ಗಾಂಧಿನಡಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ರಾಜ್ಯದ ಪ್ರಚಲಿತ ರಾಜಕೀಯ ಆಡಳಿತದ ಪರಿಚಯದ ಜೊತೆಗೆ, ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಕುರಿತು ಕಾರ್ಯಾಗಾರ ನಡೆಸಲಾಗುವುದು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಸಹ ನಾಯಕನಾಗಿ ಹೊರಹೊಮ್ಮಬೇಕು ಎಂಬ ಆಶಯದೊಂದಿಗೆ ಹೆಸರಘಟ್ಟ ರಸ್ತೆಯ ಶ್ರೀಗಿರಿ ಕಲ್ಯಾಣ ಮಂಟಪದಲ್ಲಿ ಗಾಂಧಿ ನಡಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಸೆಪ್ಟಂಬರ್ 29ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ ಎಂದರು.

ರೈತರು, ಕೂಲಿ ಕಾರ್ಮಿಕರು, ಕುಶಲಕರ್ಮಿಗಳು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿ ಅವರ ಸಮಸ್ಯೆಗಳನ್ನು ಆಲಿಸಬೇಕು. ಪ್ರಸ್ತುತ ಆಡಳಿತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ, ಆಡಳಿತ ವೈಪಲ್ಯ ತಿಳಿಸಿ ಕಾಂಗ್ರೆಸ್ ಸಮನ್ವಯ ಆಡಳಿತ ನೀಡಿ ದೇಶಕಟ್ಟಲು ಸಿದ್ದವಾಗಿರುವುದನ್ನು ತಿಳಿಸುವ ಉದ್ದೇಶ ನಮ್ಮದಾಗಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಗಾರದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯ್ಲಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬೆಂ.ಉ.ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ರಾಜಕುಮಾರ್ ಸ್ವಾಗತ ಭಾಷಣ ಮಾಡಲಿದ್ದು, ಮುಖ್ಯ ಅಥಿತಿಗಳಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಸೇರಿದಂತೆ ಯುವ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರೊ.ಕೆ.ಇ.ರಾಧಾಕೃಷ್ಣ, ಮಾಜಿ ಸಚಿವ ಬಿ.ಎಲ್.ಶಂಕರ್, ಮಾಜಿ ಸಂಸದ ಪ್ರೊ.ರಾಜೀವ್ ಗೌಡ, ರಾಜ್ಯಸಭಾ ಮಾಜಿ ಸಭಾಪತಿ ಕೆ.ರೆಹಮಾನ್ ಖಾನ್ ರಾಜ್ಯದ ಪ್ರಚಲಿತ ರಾಜಕೀಯದ ಪರಿಚಯ ಮಾಡಿಕೊಡಲಿದ್ದಾರೆ ಎಂದರು.

Leave a Reply