58 ಕ್ಷೇತ್ರಗಳ ಆಯ್ಕೆಗೆ ದೆಹಲಿಯಲ್ಲಿ ಕಾಂಗ್ರೆಸ್ ಕಸರತ್ತು

3 years ago

#Congress #exercise #Delhi #selection #constituencies #election #kpcc

ಬೆಂಗಳೂರು: ಆಡಳಿತಾರೂಢ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ತನ್ನ ಹುರಿಯಾಳುಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದೀಗ ಅಂತಿಮ ಪಟ್ಟಿ ಬಿಡುಗಡೆಗೆ ಕಸರತ್ತು ನಡೆಸಿದೆ.

ಸತತ ಸಮಾಲೋಚನೆ ಮತ್ತು ಗೆಲುವಿನ ಮಾನದಂಡ ಆಧರಿಸಿ ಅಳೆದು, ತೂಗಿ ಈಗಾಗಲೇ ಎರಡು ಹಂತದಲ್ಲಿ ಒಟ್ಟು 166 ಕ್ಷೇತಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕಾಂಗ್ರೆಸ್ ಬಾಕಿ ಇರುವ 58 ಕ್ಷೇತ್ರಗಳಿಗೆ ಹುರಿಯಾಳುಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತನ್ನು ಮುಂದುವರೆಸಿದೆ.

ಬಾಕಿ ಇರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀವ್ರ ಪೈಪೋಟಿ ಉಂಟಾಗಿದೆ. ಇದರ ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ನಿಂದ ಕೆಲವರು ಕಾಂಗ್ರೆಸ್ ಗೆ ಬರುವ ಸಾಧ್ಯತೆ ಇದೆ ಎಂದು ಆ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಇನ್ನು ಕೆಲ ದಿನಗಳವರೆಗೆ ಮುಂದೂಡಲು ಖರ್ಗೆ ನೇತೃತ್ವದ ಸಭೆ ತೀರ್ಮಾನಿಸಿದೆ .

ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಎರಡನೇ ಜಿಲ್ಲೆಯ ಸ್ಥಾನ ಪಡೆದಿರುವ ಗಡಿನಾಡು ಬೆಳಗಾವಿಗೆ ಮೊದಲ ಪಟ್ಟಿಯಲ್ಲಿ ಒಂಬತ್ತು, ಎರಡನೇ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಒಟ್ಟು ಹದಿನೆಂಟು ಕ್ಷೇತ್ರಗಳ ಪೈಕಿ ಆಪರೇಷನ್ ಕಮಲದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಅಲ್ಲಿ ಟಿಕೆಟ್‍ಗಾಗಿ ಪರದಾಡುತ್ತಿರುವ ಮಹೇಶ್ ಕುಮಟಳ್ಳಿ ಅವರ ಅಥಣಿ, ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸುವ ಅರಭಾವಿ, ಉಳಿದಂತೆ ರಾಯಭಾಗ ಮೀಸಲು, ಬೆಳಗಾವಿ ಉತ್ತರ ಮತ್ತು ದಕ್ಷಿಣ ಸೇರಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಹಗ್ಗಜಗ್ಗಾಟ ನಡೆಯುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಆರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ. ಸಿದ್ದರಾಮಯ್ಯ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವೆ ಉಮಾಶ್ರೀ ಅವರು ಸ್ಪರ್ಧಿಸಿದ್ದ ತೆರದಾಳಕ್ಕೆ ಇನ್ನೂ ಹೆಸರನ್ನು ಅಂತಿಮಗೊಳಿಸಿಲ್ಲ.

ಬಿಜಾಪುರ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ವಿಧಾನ ಪರಿಷತ್‍ನ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ್ ಆಕಾಂಕ್ಷಿಯಾಗಿರುವ ದೇವರಹಿಪ್ಪರಗಿ ಮತ್ತು ಸಿಂಧಗಿ ಕ್ಷೇತ್ರ ಹೊರತು ಪಡಿಸಿ ಉಳಿದ ಆರಕ್ಕೆ ಅಭ್ಯರ್ಥಿಗಳ ಘೋಷಣೆಯಾಗಿದೆ.

Leave a Reply