ಉದ್ದಿಮೆಗಳನ್ನ ಪಕ್ಕದ ರಾಜ್ಯಗಳಿಗೆ ಬಿಟ್ಟು ಕೊಟ್ಟು ರಾಜ್ಯ ಬರಿಗೈ ಆಗಬೇಕಾ?: ಕೆಪಿಸಿಸಿ

4 years ago

ಬೆಂಗಳೂರು: ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕನ್ನಡ ನಾಡಿನ ನೆಲದ ಅಸ್ತಿತ್ವಕ್ಕೆ ಧಕ್ಕೆ ಬರುವಂತಹ ಕೃತ್ಯಗಳಿಗೆ ಲೆಕ್ಕವೇ ಇಲ್ಲ. ಒಂದು ಕಡೆ ಬೆಳಗಾವಿ ನಮಗೇ ಸೇರಬೇಕು ಅಂತ ಮಹಾರಾಷ್ಟ್ರ ಸರ್ಕಾರ ಕಾಲು ಕೆರೆದು ಕೊಂಡು ನಿಂತಿದೆ. ಆದರೆ ಅದ್ಯಾಕೋ ಏನೋ ಸರ್ಕಾರ ಮಾತ್ರ ಇದಕ್ಕೆ ತಕ್ಕ ಉತ್ತರ ಕೊಡಲಾಗದೇ ತತ್ತರಿಸಿ ಹೋಗಿದೆ. ಇದರ ಮಧ್ಯೆ ಮತ್ತೊಂದು ಕಡೆ ತೆಲಂಗಾಣ ಕೂಡಾ ಕೆಣಕಲು ಶುರು ಮಾಡಿದೆ ಎಂದು ಕೆಪಿಸಿಸಿ ಹೇಳಿದೆ.

ರಾಯಚೂರಿನ ಕೆಲವು ಭಾಗಗಳು ತೆಲಂಗಾಣ ರಾಜ್ಯಕ್ಕೆ ಸೇರಬೇಕು ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಬೆಳಗಾವಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಮೌನ ನೆರೆಯ ತೆಲಂಗಾಣ ಸರ್ಕಾರವನ್ನ ಪುಟಿದೇಳುವಂತೆ ಮಾಡಿದೆ. ನಮ್ಮ ರಾಜ್ಯದ ರಾಯಚೂರು ಜಿಲ್ಲೆಯನ್ನ ತನ್ನ ಭೂಪಟದಲ್ಲಿ ಸೇರಿಸಿಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರದ ಕಲ್ಯಾಣ ಯೋಜನೆಗಳಿಂದ ಆಕರ್ಷಿತರಾಗಿರುವ ರಾಯಚೂರು ಜಿಲ್ಲೆಯ ಜನರು ತಮ್ಮ ಪ್ರದೇಶವನ್ನು ತೆಲಂಗಾಣದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಹೇಳಿದ್ದಾರೆ. ಚಂದ್ರಶೇಖರ ರಾವ್ ಅವರ ಈ ಹೇಳಿಕೆ ಅತ್ಯಂತ ಖಂಡನೀಯ ಅನ್ನುವುದರಲ್ಲಿ ಎರಡು ಮಾತಿಲ್ಲ ಎಂದಿದೆ.
ಕೆಲ ತಿಂಗಳ ಹಿಂದಷ್ಟೇ ಅಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್ ಗಂಟುಮೂಟೆ ಕಟ್ಟಿಕೊಂಡು ಬನ್ನಿ ನಮ್ಮಲ್ಲಿ ಉತ್ತಮ ಮೂಲ ಸೌಕರ್ಯವಿದೆ ಅಂತ ಉದ್ಯಮಿಗಳನ್ನ ಆಹ್ವಾನಿಸಿದ್ದರು. ಆಗಲೇ ನಮ್ಮ ಸರ್ಕಾರದ ಶೂರರು ದಿಟ್ಟ ಉತ್ತರ ನೀಡಬೇಕಿತ್ತು. ಅಂದು ಬಾಯಿ ಮುಚ್ಚಿಕೊಂಡಿದ್ದ ಪರಿಣಾಮ ಇವತ್ತು ರಾಯಚೂರನ್ನೇ ಕೇಳುವಷ್ಟರ ಮಟ್ಟಿಗೆ ಅವರು ಮಾತಾಡುತ್ತಿದ್ದಾರೆ ಎಂದಿದೆ.
ಇಲ್ಲಿ ತೆಲಂಗಾಣ ರಾಯಚೂರಿನ ವಿಚಾರಕ್ಕೆ ಬಂದಿರುವುದಕ್ಕೆ ಕಾರಣ ಈ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಅಲ್ಲದೇ ಮತ್ತೇನೂ ಅಲ್ಲ. ಇನ್ನು ಕೆಸಿಆರ್ ಇಂಥದೊಂದು ಹೇಳಿಕೆ ನೀಡಿ ಒಂದು ದಿನವೇ ಕಳೆದಿದೆ. ಆದರೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಾತ್ರ ತುಟಿ ಎರಡು ಮಾಡಿಲ್ಲ. ಇನ್ನು ಇದು ನಿಮ್ಮದೇ ಪಕ್ಷದ ಶಾಸಕ ಶಿವರಾಜ್ ಪಾಟೀಲ್‌ ಕೊಟ್ಟಿರುವ ಸಲಹೆಯಂತೆ. ಹೀಗಿದ್ದರೂ ಶಿವರಾಜ್ ಪಾಟೀಲ್ ವಿರುದ್ಧ ಯಾಕೆ ಬೊಮ್ಮಾಯಿ ಅವರು ಕ್ರಮ ಜರುಗಿಸಿಲ್ಲ ಎಂದಿದೆ.
ಬೊಮ್ಮಾಯಿ ಅವರೇ…ನಿಮ್ಮ ಈ ಮೌನ ಹಾಗೂ ಹೊಣೆಗೇಡಿತನಕ್ಕೆ ಕರ್ನಾಟಕ ಗಡಿ ಜಿಲ್ಲೆಗಳನ್ನು ಕಳೆದುಕೊಳ್ಳಬೇಕಾ? ಹಾಗೂ ಉದ್ದಿಮೆಗಳನ್ನ ಪಕ್ಕದ ರಾಜ್ಯಗಳಿಗೆ ಬಿಟ್ಟು ಕೊಟ್ಟು ರಾಜ್ಯ ಬರಿಗೈ ಆಗಬೇಕಾ? ಎಂದು ಪ್ರಶ್ನಿಸಿದೆ.

Leave a Reply