ಗೊತ್ತುಗುರಿ ಇಲ್ಲದ ಶಿಕ್ಷಣ ನೀತಿ: ಕಾಂಗ್ರೆಸ್ ಟೀಕೆ
ಬೆಂಗಳೂರು: ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನೂರೆಂಟು ಗೊಂದಲಗಳಿವೆ. ಕೊರೊನಾ ಸಮಯದಲ್ಲಿ ಎಲ್ಲ ಅಯೋಮವಾಗಿದ್ದ ಸ್ಥಿತಿಯಿಂದ ಈಗ ಶರವೇಗದ ವ್ಯವಸ್ಥೆಗೆ ಪ್ರಾಂಶುಪಾಲರು ಸೇರಿದಂತೆ ಸಿಬ್ಬಂದಿಗಳು ಹೊಂದಿಕೊಳ್ಳಬೇಕಿದೆ. ರಾಜ್ಯ ಸರ್ಕಾರ ಹೈಕಮಾಂಡ್ ಮೆಚ್ಚಿಸಲು ತರಾತುರಿಯಲ್ಲಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಜಾಲತಾಣಗಳಲ್ಲಿ ಟೀಕಿಸಿದೆ.
ಬಿಜೆಪಿ ಸರ್ಕಾರ ಕರ್ನಾಟಕವನ್ನು ತನ್ನ ಪ್ರಯೋಗಶಾಲೆ ಮಾಡಿಕೊಂಡಿರುವಂತೆ ಕಾಣಿಸುತ್ತೆ.? ರಾಜ್ಯ ಸರ್ಕಾರ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ಸಮರ್ಪಕವಾಗಿ ತರಬೇತಿ ನೀಡದೆ. ಏಕಾಏಕಿ ಜಾರಿಗೊಳಿಸಿ, ತಕ್ಷಣಕ್ಕೆ ಹೊಸ ಶಿಕ್ಷಣ ನೀತಿಯಿಂದ ಪ್ರವೇಶಾತಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದಿದೆ.
ವಿದ್ಯಾರ್ಥಿಗಳಿಗೆ ದಾಖಲಾತಿ ಪಡೆಯಲು ಬರುವಾಗ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ದೊಡ್ಡ ತಲೆನೋವಾಗಿದೆ. ಎನ್‌ಇಪಿ ಬಗ್ಗೆ ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸೇರಿದಂತೆ ಪೋಷಕರಲ್ಲಿ ಗೊಂದಲ ಸೃಷ್ಟಿಯಾಗಿದೆ. ದೃತರಾಷ್ಟ್ರನಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ತಮಗೆ ಬೇಕಾದ ರೀತಿ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ, ಎಲ್ಲರಿಗೆ ಗೊಂದಲ ಸೃಷ್ಟಿಸಿದೆ ಎಂದು ವಾಗ್ದಾಳಿ ನಡೆಸಿದೆ.




