ಮಂಗಳೂರು: ದೇಶದ ಸ್ವಾತಂತ್ರ್ಯ ಚಳುವಳಿಗೆ ಅಪಾರ ಕೊಡುಗೆ ನೀಡಿದ ಮಹಾತ್ಮ ಗಾಂಧಿಯವರ ಚಿಂತನೆಗಳು ಪ್ರಸ್ತುತ ದೇಶಕ್ಕೆ ಭಾರೀ ಅಗತ್ಯವಿದೆ ಎಂದು ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯಾಧ್ಯಕ್ಷ ರಾಘವ ಕೆ.ಯವರು ಅಭಿಪ್ರಾಯ ಪಟ್ಟರು.
ಮಹಾತ್ಮ ಗಾಂಧಿಯವರ 74ನೇ ಹುತಾತ್ಮ ದಿನಾಚರಣೆಯ ಅಂಗವಾಗಿ ನಗರದ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸೌಹಾರ್ದ ಭಾರತಕ್ಕೆ ಎದುರಾಗಿರುವ ಸವಾಲುಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿ ಮಾತಾಡಿದ ಅವರು, ವಿಪರ್ಯಾಸವೆಂದರೆ ಸ್ವಾತಂತ್ರ್ಯ ಚಳುವಳಿಯಲ್ಲಿ ಎಳ್ಳಷ್ಟೂ ಭಾಗವಹಿಸದವರು ಇಂದು ದೇಶವನ್ನು ಆಳುತ್ತಿರುವುದು ದುರಂತವಾಗಿದೆ. ಮಾತ್ರವಲ್ಲದೆ ಸ್ವಾತಂತ್ರ್ಯದ ಆಶಯಗಳನ್ನು ಮಣ್ಣುಪಾಲು ಮಾಡಿ ಮತ್ತೆ ಧರ್ಮದ ಆಧಾರದಲ್ಲಿ ದೇಶ ವಿಭಜನೆಯ ಹುನ್ನಾರ ನಡೆಸುತ್ತಿರುವ ಕೋಮುವಾದಿ ಶಕ್ತಿಗಳು ವ್ಯವಸ್ಥಿತ ರೀತಿಯಲ್ಲಿ ಗಾಂಧೀಜಿಯವರ ಚಿಂತನೆಗಳ ವಿರುದ್ಧ ಕೋಮುವಾದಿ ಧ್ರುವೀಕರಣಗೊಳಿಸಿ ಗಾಂಧಿ ಹತ್ಯೆಯನ್ನು ಸಮರ್ಥಿಸುತ್ತಿರುವುದು ಅತ್ಯಂತ ಅಪಾಯಕಾರಿ ಎಂದರು.
CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ.ಕೃಷ್ಣಪ್ಪ ಕೊಂಚಾಡಿ ಮಾತನಾಡುತ್ತಾ, ಗಾಂಧೀಜಿಯವರ ವ್ಯಕ್ತಿತ್ವ ಹಾಗೂ ಚಿಂತನೆಗಳು ಜಗತ್ತಿನಾದ್ಯಂತ ಪ್ರಭಾವಿಸಿದೆ. ದೇಶದ ಐಕ್ಯತೆ ಮತ್ತು ಸೌಹಾರ್ದತೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಗಾಂಧಿಯವರ ಚಿಂತನೆಗಳನ್ನು ಇಡೀ ದೇಶವೇ ಮೈಗೂಡಿಸಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ CPIM ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡುತ್ತಾ, ಸೌಹಾರ್ದ ಭಾರತದ ನಿರ್ಮಾಣದಲ್ಲಿ ಕೋಮುವಾದಿ ಶಕ್ತಿಗಳು ತೊಡಕಾಗಿದ್ದು, ಕೋಮು ವಿಷಬೀಜವನ್ನು ಬಿತ್ತಿ ಮತ್ತೆ ದೇಶ ಒಡೆಯಲು ಹುನ್ನಾರ ನಡೆಸುತ್ತಿದೆ. ಇಂತಹ ಕಠಿಣ ಸವಾಲನ್ನು ಎದುರಿಸಿ ದೇಶವನ್ನು ಉಳಿಸಲು ಎಲ್ಲಾ ಜಾತ್ಯಾತೀತ ಪ್ರಗತಿಪರ ಪ್ರಜಾಪ್ರಭುತ್ವವಾದಿ ಶಕ್ತಿಗಳು ಒಂದಾಗಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ ಎಂದರು.
ಪ್ರಾರಂಭದಲ್ಲಿ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರೆ, ಕೊನೆಯಲ್ಲಿ ಬಶೀರ್ ಪಂಜಿಮೊಗರು ವಂದಿಸಿದರು.




