ಕಾಂಗ್ರೆಸ್‌ನಲ್ಲಿ ‘ನಾನೇ ಸಿಎಂ’ ಎಂಬ ಸಂಘರ್ಷ ಶುರುವಾಗಿದೆ: ಯಡಿಯೂರಪ್ಪ

3 years ago

ಬೆಂಗಳೂರು: ಕೆಲ ದಿನಗಳ ಕಾಲ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ಮತ್ತೊಮ್ಮೆ ಚುರುಕಾಗಿದ್ದಾರೆ.
ಪಕ್ಷದ ವಿಶೇಷ ಕಾರ್ಯಕಾರಿಯಲ್ಲಿ ಪಾಲ್ಗೊಂಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 130ರಿಂದ 140 ಸ್ಥಾನಗಳನ್ನು ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮತ್ತು ದೇಶದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಪರವಾದ ಅಲೆ ಬೀಸುತ್ತಿದೆ ಹೀಗಾಗಿ ನಮ್ಮ ಪಕ್ಷದ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು  ಹೇಳಿದರು.
ಅಧಿಕಾರಕ್ಕೆ ಬರುವ ನಂಬಿಕೆಯೇ‌ ಇಲ್ಲದ ಕಾಂಗ್ರೆಸ್‌ನಲ್ಲಿ ‘ನಾನೇ ಸಿಎಂ’ ಎಂಬ ಸಂಘರ್ಷ ಶುರುವಾಗಿದೆ. ಸಿಎಂ ಹುದ್ದೆಗಾಗಿ ನಾಯಕರು ಬಡಿದಾಡುತ್ತಿದ್ದಾರೆ. ಇಂತಹ ಪಕ್ಷ ಕಾಂಗ್ರೆಸ್ ನ ನಾಯಕ ಯಾರು? ರಾಹುಲ್ ಗಾಂಧಿ ಒಬ್ಬ ನಾಯಕರೇ ಎಂದು ಪ್ರಶ್ನಿಸಿದರು.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ತನ್ನ ಉಸ್ತುವಾರಿಯನ್ನಾಗಿ ಧರ್ಮೇಂದ್ರ ಪ್ರಧಾನ್ ಹಾಗೂ ಸಹ ಉಸ್ತುವಾರಿಯನ್ನಾಗಿ ಕೆ.ಅಣ್ಣಾಮಲೈ ಅವರನ್ನು ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ.
ಇವರಿಬ್ಬರೂ ಸಮರ್ಥರಿದ್ದಾರೆ. ಚುನಾವಣೆ ಗೆಲ್ಲಲು ನಮ್ಮ ಪಕ್ಷಕ್ಕೆ ಸಹಕಾರಿಯಾಗಲಿದ್ದಾರೆ ಎಂದರು.
ಮನೆ ಮನೆಗೆ ತಲುಪಿಸಿ: ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೂ ತಲುಪಿದೆ ಎಂದು ತಿಳಿಸಿದರು.
ನಮ್ಮ ಯೋಜನೆಗಳನ್ನು ಪ್ರತಿಯೊಬ್ಬರ ಮನೆಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ಯಾರ ಮನೆಗೆ ಯೋಜನೆಗಳು ತಲುಪಿಲ್ಲವೋ ಪಟ್ಟಿ ಮಾಡಿ ತಲುಪಿಸುವ ಕೆಲಸವಾಗಬೇಕು. ಆಗ ಪಕ್ಷದ ಬಗ್ಗೆ ಎಲ್ಲರಿಗೂ ಅಭಿಮಾನ ಮೂಡುತ್ತದೆ ಎಂದು ಸಲಹೆ ಮಾಡಿದರು.
ಗೋಹತ್ಯೆ ನಿಷೇಧ ಕಾಯಿದೆ ತಂದಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ವಿಕಾಸಸೌಧದ ಮುಂದೆ ಅಂಬೇಡ್ಕರ್ ಸ್ಪೂರ್ತಿ ಭವನ ನಿರ್ಮಾಣವಾಗುತ್ತಿದೆ. ಪಕ್ಷ ಯಾರ ಮೇಲೆ ಅವಲಂಬಿತರಾಗದೇ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ. ಬರುವ ಬಜೆಟ್ ಕೂಡ ನಮಗೆ ಶಕ್ತಿಯಾಗಲಿದೆ ಎಂದರು.
ಕಾಂಗ್ರೆಸ್ನ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನವೇ ಬೇಡ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಬಿಜೆಪಿಯಲ್ಲಿರುವ ಸಂಘಟನೆ ಬೇರೆ ಯಾವ ಪಕ್ಷಗಳಲ್ಲೂ ಇಲ್ಲ. ನಮಗೆ ಸಿಕ್ಕ ಕಾರ್ಯಕರ್ತರು ದೇವರ ಕೊಡುಗೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸಂಘಟನೆ, ಕಾರ್ಯಕರ್ತರು ಇರಲು ಸಾಧ್ಯವೇ ಇಲ್ಲ ಎಂದರು.
ಯಡಿಯೂರಪ್ಪ ಸರ್ಕಾರ, ಬೊಮ್ಮಾಯಿ ಸರ್ಕಾರ ಹಲವು ಜನೋಪಯೋಗಿ ಯೋಜನೆಗಳನ್ನು ನೀಡಿದೆ. ಇದರ ಸಹಾಯದಿಂದ ನಾವು ರಾಜ್ಯದಲ್ಲಿ ಮತ್ತೆ ಗೆದ್ದು ಅಕಾರ ಹಿಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಿಟ್ಟು ಹಲವರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನೇತಾರನೂ ಇಲ್ಲ, ನಾಯಕತ್ವವೂ ಇಲ್ಲ. ಕಾಂಗ್ರೆಸ್ನವರರಿಗೆ ರೀತಿ-ನೀತಿ ಇಲ್ಲ ಓಲೈಕೆ ರಾಜಕಾರಣವೇ ಅವರ ಆಸ್ತಿ. ರಾಹುಲ್ ಗಾಂಧಿ ಯಾವಾಗ ಏನ್ ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ ಎಂದರು.

Leave a Reply