ಬೆಂಗಳೂರು: ಹೌದು ಇದೊಂದು ಕರುಣಾಜನಕ ಕತೆ. ಸರ್ಕಾರ ಕನಿಷ್ಠ ವೇತನವನ್ನು ನಿಗದಿಗೊಳಿಸಿದ್ದರೂ, ಸಂವಿಧಾನದ ಪ್ರಕಾರ, ನಿಯಮಗಳ ಪ್ರಕಾರ ವೇತನ ನೀಡದೆ ಇರುವ ಸಂಗತಿ ಬಹಿರಂಗವಾಗಿದೆ.
ಕವಿಪ್ರನಿನಿ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಳೆದ 40 ವರ್ಷಗಳಿಂದ ಕೇವಲ 50 ರೂ. ವೇತನಕ್ಕೆ ದುಡಿಯುತ್ತಿರುವ ಅರೆಕಾಲಿಕ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಈ ವಿಷಯ ಬಹಿರಂಗವಾಗಿದೆ.

ಇಂದು ವಿಧಾನಸೌಧದಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ ಅವರನ್ನು ಕಾರ್ಮಿಕ ಮುಖಂಡರಾದ ಕರಣ್ ಶೀಲ ಟಿ ಮೌರ್ಯ, ಡಾ. ಎ.ಆರ್ ಗೋವಿಂದ ಸ್ವಾಮಿ ನೇತೃತ್ವದಲ್ಲಿ ಸಫಾಯಿಕರ್ಮಚಾರಿಗಳಾದ ಗಣೇಶ್, ಚೆಲುವರಾಜು, ಮಹದೇವ ಮುಂತಾದವರು ಭೇಟಿ ಮಾಡಿದರು. ಈ ವೇಳೆ ಕವಿಪ್ರನಿನಿ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಳೆದ 40 ವರ್ಷಗಳಿಂದ ಐವತ್ತು ರೂಪಾಯಿ ಸಂಬಳದಿಂದ ಕೆಲಸ ನಿರ್ವಹಿಸುತ್ತಿರುವ ಅರೆಕಾಲಿಕ ಶುಚಿಗಾರರನ್ನು ಖಾಯಂಗೊಳಿಸಲು ಮನವಿ ಸಲ್ಲಿಸಿದರು.
ಇನ್ನಾದರೂ ಸರ್ಕಾರ ಪೌರಕಾರ್ಮಿಕರ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕಿದೆ.




